Online News in ಕನ್ನಡ

ಕರ್ನಾಟಕ ಬೈ ಎಲೆಕ್ಷನ್:‌ ದಾವಣಗೆರೆ, ಬಾಗಲಕೋಟೆ ಗೆದ್ದು ಬೀಗಿದ ಕಾಂಗ್ರೆಸ್‌

ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅತೀ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು ಕಡಿಮೆ ಅಂತರಗಳಿಂದ ಗೆಲುವು ದಾಖಲಿಸಿದರೆ, ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಭಾರೀ ಮತಗಳ ಅಂತರದಿಂದ ವಿಜಯದ ಮಾಲೆಯನ್ನು ಕೊರಳಿಗೇರಿಸಿಕೊಂಡರು.
ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿದ್ದರು. ಸತತ 8 ಸುತ್ತಿನವರೆಗೂ ಬಿಜೆಪಿ ಅಭ್ಯರ್ಥಿ ಅಲ್ಪ ಮುನ್ನಡೆ ಸಾಧಿಸಿಕೊಂಡು ಬಂದಿದ್ದರು. ಆದರೆ, ಎಂಟನೇ ಸುತ್ತಿನಲ್ಲಿ ಏಕಾಏಕಿ ಕಾಂಗ್ರೆಸ್‌ ಅಭ್ಯರ್ಥಿ  ಸಮರ್ಥ್‌ಗೆ 8 ಸಾವಿರಕ್ಕೂ ಹೆಚ್ಚು ಮತಗಳು ಬಂದ ಪರಿಣಾಮ ಮುನ್ನಡೆ ಸಾಧಿಸಿದರು. ಆನಂತರ ಕೊನೆಯ ಸುತ್ತಿನವರೆಗೂ 5 ರಿಂದ 7 ಸಾವಿರ ಮತಗಳ ಅಂತರವನ್ನು ಕಾಯ್ದುಕೊಂಡೇ ಬಂದ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು ೬೯೫೭೮ ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ೬೩,೮೭೦ ಮತಗಳನ್ನು ಪಡೆದರು.
ವಿಶೇಷವೆಂದರೆ, ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್‌ ಕೊಡ್ಲಿಪೇಟ್‌ ಅವರು 18 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮುಸ್ಲಿಂರ ಆಕ್ರೋಶವನ್ನು ಹೊರ ಹಾಕಿದರು. ಆಮೂಲಕ ದಾವಣಗೆರೆ ದಕ್ಷಿಣದಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ, ಮುಸ್ಲಿಂರ ಮುನಿಸಿನ ನಡುವೆ ಕೈಗೆ ದಾವಣಗೆರೆ ಬೆಣ್ಣೆ ದೋಸೆ ಲಭಿಸಿದೆ.
ಇನ್ನು ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ವಿರುದ್ಧ 21,866 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಕತ್ತಿ ಪರವಾಗಿ 97,941 ಮತಗಳು ಬಂದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಕರಂತಿಮಠ ಅವರಿಗೆ 76,077 ಮತಗಳು ಬಂದವು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಬಂದ ಕಾಂಗ್ರೆಸ್‌ ಅಭ್ಯರ್ಥಿ ನಿರಾಯಸವಾಗಿ ಗೆಲುವು ಸಾಧಿಸಿದರು.
ಒಟ್ಟಾರೆ, ದಾವಣಗೆರೆ ದಕ್ಷಿಣಾ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

Call Now Button