Online News in ಕನ್ನಡ

ವೃದ್ಧ ಮಹಿಳೆಯ ನಿಗೂಢ ನಾಪತ್ತೆ: ಕಾಣೆಯಾದ ಸ್ಥಳದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ

ನಂಜನಗೂಡು : ಜಮೀನಿಗೆ ತೆರಳಿದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ನಾಪತ್ತೆಯಾದ ಸ್ಥಳದಲ್ಲಿ ಮನುಷ್ಯರು ಸೃಷ್ಟಿಸಿದ ಕೃತಕ ಚಿರತೆ ಹೆಜ್ಜೆಯಂತಹ ಗುರುತು ಪತ್ತೆಯಾಗಿದ್ದು ಹಲವು ಹನುಮಾನಕ್ಕೆ ಕಾರಣವಾಗಿ ವೃದ್ಧ ಮಹಿಳೆ ಅಪಹರಣವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿರಬಹುದೋ ಎಂಬ ಅನುಮಾನ ಹಾಗೂ ಆತಂಕ ಶುರುವಾಗಿದೆ. ಘಟನೆ ಕುರಿತು ಕುಟುಂಬಸ್ಥರು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾದ ವೃದ್ಧ ಮಹಿಳೆ.ನಿನ್ನೆ ಜಮೀನಿಗೆ ಎಂದು ಮನೆ ಬಿಟ್ಟ ಶಿವರುದ್ರಮ್ಮ ಮತ್ತೆ ಹಿಂದಿರುಗಿಲ್ಲ.ತಡರಾತ್ರಿ ಆದ್ರೂ ಮನೆಗೆ ಹಿಂದಿರುಗದ ಹಿನ್ನಲೆ ಕುಟುಂಬಸ್ಥರು ಆತಂಕಗೊಂಡು ನಂಜನಗೂಡು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಶಿವರುದ್ರಮ್ಮ ತೆರಳಿದ್ದ ಜಮೀನು ಬಳಿ ಮನುಷ್ಯರು ಬೆರಳಿನಿಂದ ಸೃಷ್ಟಿಸಿದ ಚಿರತೆಯ ಕೃತಕ ಹೆಜ್ಜೆಯಂತಹ ಗುರುತು ಪತ್ತೆಯಾಗಿದೆ.ಅಲ್ಲದೆ ಶಿವರುದ್ರಮ್ಮ ರವರ ಚಪ್ಪಲಿಗಳು ಸಹ ಸ್ಥಳದಲ್ಲೆ ಪತ್ತೆ ಯಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ . ಇಲ್ಲ ಕಾಡುಪ್ರಾಣಿಗಳು ಏನಾದರೂ ಎಳೆದೊಯ್ದಿರಬಹುದೆಂಬ ಶಂಕೆಯಿಂದ ನಂಜನಗೂಡು ಅರಣ್ಯ ಇಲಾಖೆ ಅಧಿಕಾರಿಗಳಿಗೂ ಸಹ ಕುಟುಂಬಸ್ಥರು ದೂರು ನೀಡಿದ್ದಾರೆ ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಶೋಧನೆ ನಡೆಸಿದ್ದಾರೆ.ಕೃತಕ ಚಿರತೆ ಹೆಜ್ಜೆ ಗುರುತು ಹೊರತುಪಡಿಸಿದರೆ ಎಳೆದೊಯ್ದಿರುವ ಇನ್ಯಾವುದೇ ಕುರುಹುಗಳು ಸ್ಥಳದಲ್ಲಿ ಕಂಡು ಬಂದಿಲ್ಲ.ಶಿವರುದ್ರಮ್ಮ 60 ಗ್ರ ಚಿನ್ನದ ಸರ ಹಾಗೂ 10 ಗ್ರಾಂ ಕಿವಿ ಓಲೆ ಧರಿಸಿದ್ದರೆಂದು ಹೇಳಲಾಗಿದೆ.
ಶಿವರುದ್ರಮ್ಮ ನಾಪತ್ತೆ ಪ್ರಕರಣ ಈಗ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದ್ದು ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿದೆಯೋ ಗೊತ್ತಿಲ್ಲ.ಸಧ್ಯ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡು ಶಿವರುದ್ರಮ್ಮ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ವೃದ್ಧ ಮಹಿಳೆಯ ನಿಗೂಢ ನಾಪತ್ತೆ ಪ್ರಕರಣ ಕಸುವಿನಹಳ್ಳಿ ಗ್ರಾಮಸ್ಥರು ಮತ್ತು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿರುವುದಂತೂ ಗ್ಯಾರಂಟಿಯಾಗಿದ್ದು ಪೊಲೀಸರ ತನಿಕೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬೀಳಬೇಕಾಗಿದೆ..

Call Now Button