ಬೆಂಗಳೂರು: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಸಂಘಟನಾ ಚತುರ, ಕಾಂಗ್ರೆಸ್ ನಿಷ್ಠ, ಛಲಬಿಡದ ತ್ರಿವಿಕ್ರಮ ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಜಕೀಯ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು, ಮಠಾಧೀಶರು, ಸಾಧು-ಸಂತರು, ಸಿನಿಮಾ ಗಣ್ಯರು, ಕುಟುಂಬದ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರು ಸಾಕ್ಷಿಯಾದರು.
ಇವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಹಾಗೂ ಇತರೆ 12 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂಜೆ 4.05ರಲ್ಲಿ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಆಮೂಲಕ ಕರ್ನಾಟಕ ರಾಜ್ಯದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದಂತ್ತಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ಚರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಭಾಗವಹಿಸಿದ್ದರು. ಪ್ರಮಾಣವಚನ ಸಮಾರಂಭದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪತ್ನಿ, ಪುತ್ರಿ ಹಾಗೂ ಮಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಿಸಿ ಆಶೀರ್ವಾದ ಪಡೆದರು. ವಂದೇ ಮಾತರಂ ಹಾಗೂ ನಾಡಗೀತೆಯೊಂದಿಗೆ ಆರಂಭಗೊಂಡ ಸಮಾರಂಭ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿದರು.
ವಿಧಾನಸೌಧದವರೆಗೂ ಮೆರವಣಿಗೆ:
ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರು ಲೋಕಭವನದಿಂದ ವಿಧಾನಸೌಧದವರೆಗೂ ಮೆರವಣಿಗೆಯಲ್ಲಿ ತೆರಳಿ ಮೂರನೇ ಮಹಡಿಯ ತಮ್ಮ ಕಚೇರಿ ಪ್ರವೇಶಿದರು. ಇಡೀ ಬೆಂಗಳೂರು ಡಿಕೆಶಿ ಮಯವಾಗಿತ್ತು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೊರ ರಾಜ್ಯದ ಗಣ್ಯರು, ಸಿನಿಮಾ ತಾರೆಯರು, ರಾಷ್ಟ್ರೀಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆಯನ್ನು ತಪ್ಪಿಸಲು ಟ್ರ್ಯಾಫಿಕ್ ನಿರ್ಬಂಧಿಸಲಾಗಿತ್ತು. ಇಡೀ ರಾಜಧಾನಿಯು ಡಿ.ಕೆ.ಶಿವಕುಮಾರ್ ಅವರ ಕಟೌಟ್, ಬ್ಯಾನರ್, ಬಂಟಿಂಗ್ಸ್‌ನಿಂದ ರಾರಾಜಿಸಿತ್ತು.
ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ವಿಧಾನಸೌಧ ತಲುಪಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಕಚೇರಿ ತಲುಪಿದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.


