Online News in ಕನ್ನಡ

ಬಿಪಿಎಲ್‌ ಕಾರ್ಡ್‌ ವಿತರಣೆಗೆ ಕ್ರಮ: ಅರ್ಜಿ ಹಾಕಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ

ಬೆಂಗಳೂರು: ಹೊಸ ಪಡಿತರ ಕಾರ್ಡ್‌ ಗಳಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರದಲ್ಲಿಯೇ ಪರಿಷ್ಕರಿಸಿ ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ ಗಳನ್ನು ವಿತರಿಸುವ ಕೆಲಸ ಆಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಪ್ರತಾಪ್‌ ಸಿಂಹ ನಾಯಕ್‌ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕಳೆದ ಸರ್ಕಾರಗಳ ಅವಧಿಯಲ್ಲೂ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ಇವೆಲ್ಲವನ್ನೂ ಹಂತ ಹಂತವಾಗಿ ಪರಿಷ್ಕರಿಸಲಾಗುತ್ತಿದೆ. ಈ ಕೆಲಸ ಈಗ ಅಂತಿಮ ಹಂತ ತಲುಪಿದ್ದು, ಪರಿಷ್ಕರಣೆ ಪೂರ್ಣಗೊಂಡ ತಕ್ಷಣ ಹೊಸ ಕಾರ್ಡ್‌ ಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ದೇಶದಲ್ಲಿಯೇ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಮಹಾರಾಷ್ಟ್ರ ನಂತರ ಎರಡನೇ ಸ್ಥಾನದಲ್ಲಿದೆ. ಹೀಗಿದ್ದರೂ ನಮ್ಮಲ್ಲಿ ಶೇ. 75ರಿಂದ 80 ರಷ್ಟು ಜನರು ಬಿಪಿಎಲ್‌ ಕಾರ್ಡ್‌ ಗಳನ್ನು ಹೊಂದಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೇ ಕಳೆದ ಸರ್ಕಾರದ ಅವಧಿಯಲ್ಲಿ ಪಡಿತರ ಕಾರ್ಡ್‌ ಗಳ ಪರಿಷ್ಕರಣೆ ವೇಳೆ ಸುಮಾರು 15 ಲಕ್ಷ ಕಾರ್ಡ್‌ಗಳು ಅನರ್ಹ ಎಂದು ಗುರುತಿಸಲಾಗಿತ್ತು. ಆದರೆ ಇದಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಕಾರ್ಯವನ್ನು ಕೈ ಬಿಡಬೇಕಾಯಿತು. ಈ ವಿಷಯದಲ್ಲಿ ಯಾವುದೇ ರಾಜಕೀಯ ಬೆರೆಸದೇ ಎಲ್ಲರೂ ಸಹಕಾರ ನೀಡಬೇಕು. ಅರ್ಹರಿಗೆ ಮಾತ್ರ ಸೌಲಭ್ಯಗಳು ದೊರಕುವಂತೆ ಮಾಡಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು.

ನಮ್ಮ ಸರ್ಕಾರ ಜನಪರವಾಗಿದ್ದು, ಅರ್ಹರಿಗೆ ಯಾವುದೇ ಸೌಲಭ್ಯ ವಂಚಿತವಾಗದಂತೆ ನೋಡಿಕೊಳ್ಳಲಾಗುವುದು. ಪಡಿತರ ಕಾರ್ಡ್‌ ಗಳ ಪರಿಷ್ಕರಣೆ ಕಾರ್ಯ ಮುಗಿಯುತ್ತಿದ್ದಂತೆಯೇ ಹೊಸ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ಗಳ ವಿತರಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

Call Now Button