Online News in ಕನ್ನಡ

ಖಾಸಗಿ ಶಾಲೆಗಳಿಗೆ ಸಮಾನವಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಬದ್ಧ

ಬೆಂಗಳೂರು, ಆಗಸ್ಟ್ 18- ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಹಾಗೂ ಶೌಚಾಲಯಗಳ ನಿರ್ವಹಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ವಿಧಾನಪರಿಷತ್‌ಗೆ ತಿಳಿಸಿದರು.
ಸದಸ್ಯ ಅನಿಲ್‌ ಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಎರಡು ವರ್ಷಗಳಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ಐದು ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಆರಂಭಿಸಿದ್ದೇವೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರಿಗೂ ಒಲವು ಬರುತ್ತದೆ ಎಂದರು.
ಈ ವರ್ಷ 144 ಪ್ರೌಢಶಾಲೆಗಳನ್ನು ಮಂಜೂರು ಮಾಡಿದ್ದೇವೆ. 500 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನ ಇಲಾಖೆಯಿಂದ, ಕೆಕೆಆರ್‌ಡಿಬಿಯಿಂದ 1 ಸಾವಿರ ಕೆಪಿಎಸ್‌‍ ಶಾಲೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಕೆಪಿಎಸ್‌‍ ಶಾಲೆಗಳಿಂದ ಒಂದು ಹಂತಕ್ಕೆ ಪೋಷಕರಲ್ಲಿ ವಿಶ್ವಾಸ ಬಂದಿದೆ. ನಾವು ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ. ಶಾಲೆಗಳ ನಿರ್ವಹಣೆಗೆ ಬಜೆಟ್‌ ಕೂಡ ಸರಿಯಾಗಿದೆ ಎಂದು ತಿಳಿಸಿದರು.
ಶೌಚಾಲಯ, ಶಾಲೆಗಳ ನಿರ್ವಹಣೆಗೆ ಅನುದಾನ ಬಳಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದಾಗ, ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕೆಪಿಎಸ್‌‍ ಶಾಲೆಗಳನ್ನು ನಿಯಮಾನುಸಾರ ಮಾಡಿ ಎಂದು ಸೂಚನೆ ನೀಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ಹೊಸ ಕೆಪಿಎಸ್‌‍ ಶಾಲೆಗಳ ಆರಂಭಕ್ಕೆ ನಿಬಂಧನೆಗಳನ್ನ ಹಾಕುತ್ತೇವೆ. ಕನಿಷ್ಠ 1200 ಮಂದಿ ವಿದ್ಯಾರ್ಥಿಗಳು ಪ್ರವೇಶ ಕಲ್ಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಮಧುಬಂಗಾರಪ್ಪ ಸಭೆಗೆ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅನಿಲ್‌ಕುಮಾರ್‌, ದೆಹಲಿ ಮಾದರಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿದೆ. ಸರ್ಕಾರದಿಂದ ಗುಣಮಟ್ಟದ ಶಿಕ್ಷಣ ಕೊಡುವ ಪ್ರಯತ್ನ ನಡೆಯುತ್ತಿದ್ದರೂ ಯಾಕೆ ದಾಖಲಾತಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಪೋಷಕರಿಗೇ ಸರ್ಕಾರಿ ಶಾಲೆಗಳ ಬಗ್ಗೆ ಒಲವಿಲ್ಲವೇ? ಯಾಕೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ? ಖಾಸಗಿ ಶಾಲೆಗಳಂತೆ ಶೌಚಾಲಯ, ಲ್ಯಾಬ್‌ಗಳಿಲ್ಲ ಎಂದು ಆಕ್ಷೇಪಿಸಿದರು.

Call Now Button