ಹುಣಸೂರು:: ನಮ್ಮ ಸಮಾಜದಲ್ಲಿ ಸರ್ವ ಜನಾಂಗದ ಶಾಂತಿ ತೋಟವಾಗಬೇಕಾದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧಿ ಅವರು ಪ್ರತಿಪಾದಿಸಿದ ಸಮಾನತೆ, ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಹುಣಸೂರು ತಾಲೂಕಿನ ಮಾದಳ್ಳಿ ಮಠದಲ್ಲಿಂದು ನಡೆದ ಬಸವ ಜಯಂತಿ ಮತ್ತು ಸ್ನೇಹಜೀವಿ ಹೆಚ್.ಪಿ. ಮಂಜುನಾಥ್ ಅವರ ಕುಟುಂಬ ನಿರ್ಮಿಸಿರುವ ಮಹಾದ್ವಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮೆಲ್ಲರ ಗುರಿ ಜಾತಿ ಹಾಗೂ ವರ್ಗ ರಹಿತ ಸಮಾಜ ನಿರ್ಮಾಣ ಮಾಡುವುದಾಗಬೇಕೆಂದರು.

ಆ ಕಾರಣದಿಂದಲೇ ಬಸಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರಕಾರ ಕ್ಯಾಬಿನೆಟ್‌ನಲ್ಲಿ ಆದೇಶ ಮಾಡಿದೆ. 2013ರಲ್ಲಿ ನಾನು ಮೊದಲು ಮುಖ್ಯಮಂತ್ರಿ ಆಗಿದ್ದಾಗ ಇಡೀ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಬೇಕೆಂದು ಆದೇಶ ಮಾಡಿದ್ದೇವೆ. ಏಕೆಂದರೆ, ಎಲ್ಲರಿಗೂ ಬಸವಣ್ಣನವರ ಆದರ್ಶ, ತತ್ವಗಳು ಅರಿವಿಗೆ ಬರಬೇಕು. ಸಮ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಹೋರಾಟದ ಅರಿವು ಮೂಡಬೇಕೆನ್ನುವುದೇ ನಮ್ಮ ಗುರಿ ಎಂದು ತಿಳಿಸಿದರು.
ʻಹರೀಶ್‌ಗೌಡ ಕರೆದಿರಲಿಲ್ಲ, ಮಂಜುನಾಥ್ ಕರೆಯುತ್ತಿದ್ದʼ
ನಾನು ಹುಣಸೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಶಾಸಕ ಹರೀಶ್‌ಗೌಡ ನನ್ನನ್ನು ಕರೆದಿರಲಿಲ್ಲ, ಆದರೆ, ಮಾಜಿ ಶಾಸಕ ಮಂಜುನಾಥ್ ನನ್ನನ್ನು ಪದೇ ಪದೇ ಕರೆಯುತ್ತಿದ್ದರು. ನನಗೆ ಸಮಯವಿಲ್ಲದೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಬಂದಿದ್ದೇನೆ. ಗ್ರಾಮೀಣ ಭಾಗದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿ ಬಸವಣ್ಣನವರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯ. ಹಾಲಿ ಮತ್ತು ಮಾಜಿ ಶಾಸಕರು ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಡಾ. ಅಂಬೇಡ್ಕರ್ ಅವರು ಹೇಳಿದಂತೆ ಯಾರು ಇತಿಹಾಸವನ್ನು ತಿಳಿದುಕೊಳ್ಳುವುದಿಲ್ಲವೋ, ಅವರು ಇತಿಹಾಸ ಸೃಷ್ಟಿಸಲಾರರು. ಆದ್ದರಿಂದ ನಮಗೆ ಬಸವಣ್ಣನವರ ಇತಿಹಾಸ ತಿಳಿದುಕೊಳ್ಳಬೇಕು. ನಾವು ಬಸವಣ್ಣನವರನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ, ಪ್ರಾರ್ಥನೆ ಮಾಡುತ್ತೇವೆ. ಅದರ ಜೊತೆಗೆ ನಮ್ಮ ಬದುಕಿನಲ್ಲಿ ಮೌಢ್ಯ, ಜಾತಿಯತೆಯನ್ನು ಹೋಗಲಾಡಿಸಬೇಕು. ಬಸವಣ್ಣ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇಡೀ ವಿಶ್ವಕ್ಕೆ ಅವರು ಬೇಕಾಗಿದ್ದಾರೆ. ಆದ್ದರಿಂದಲೇ ಅವರನ್ನು ವಿಶ್ವ ಗುರು ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.
ಕಾಯಕವೇ ಕೈಲಾಸವೆಂದು ಸಿದ್ಧಾಂತವನ್ನು ಬಸವಣ್ಣ ಪ್ರತಿಪಾದಿಸಿದ್ದಾರೆ. ಅದರ ಅರ್ಥ, ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಉತ್ಪಾದನೆಯಾದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು ಎಂದರು.
ವೇದಿಕೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬ ಸದಾಶಿವ ಸ್ವಾಮೀಜಿಗಳು, ಕಾಂಗ್ರೆಸ್‌ನ ಹಿರಿಯ ನಾಯಕ ಪ್ರೇಮ್‌ಕುಮಾರ್, ಶಾಸಕ ಜಿ.ಡಿ. ಹರೀಶ್‌ಗೌಡ, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮೊದಲಾದವರು ಭಾಗವಹಿಸಿದ್ದರು.


