Online News in ಕನ್ನಡ

ದಲಿತ ಮಹಿಳೆ ಎಂಬ ಕಾರಣಕ್ಕೆ ಶಾಲೆಯಲ್ಲಿ ಅಡುಗೆ ಮಾಡಲು ತಡೆ : ಆರೋಪಿಗಳಿಗೆ 2 ವರ್ಷ ಜೈಲು

ತಮಿಳುನಾಡು: ಏಳು ವರ್ಷಗಳ ಹಿಂದೆ ಇಲ್ಲಿನ ತಿರುಪುರ ಸರಕಾರಿ ಶಾಲಾ ಮಕ್ಕಳಿಗೆ ಅಡುಗೆ ತಯಾರಿಸದಂತೆ ದಲಿತ ಮಹಿಳೆಯನ್ನು ತಡೆದು ಅವಮಾನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಎಸ್‍ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯವು ಆರೋಪಿಗಳಾದ ಪಿ. ಪಳನಿಸ್ವಾಮಿ ಗೌಂಡರ್, ಎನ್. ಶಕ್ತಿವೇಲ್, ಆರ್. ಷಣ್ಮುಗಂ, ಸಿ. ವೆಲ್ಲಿಂಗಿರಿ, ಎ. ದುರೈಸ್ವಾಮಿ ಮತ್ತು ವಿ. ಸೀತಾಲಕ್ಷ್ಮೀ ಅವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಸದರಿ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿದೆ.
2018ರಲ್ಲಿ ತಿರುಮಲೈ ಗೌಂಡಂಪಾಲಯಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ತಯಾರಿಸುವ ಕೆಲಸಕ್ಕೆ ಸೇರಿದ್ದ ಮಹಿಳೆ ಪಿ.ಪಪ್ಪಲ್ ಅವರು ದಲಿತರು ಎಂಬ ಕಾರಣಕ್ಕೆ ಅಡುಗೆ ತಯಾರಿಸುವುದನ್ನು ಪೋಷಕರು ವಿರೋಧಿಸಿದ್ದರು. ಘಟನೆಯ ಬಗ್ಗೆ ವಿಚಾರಣೆ ನಡೆದು 35 ಮಂದಿಯ ವಿರುದ್ಧ ಎಸ್‍ಸಿ ಎಸ್ಟಿ ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿಯಲ್ಲಿ ಕೇಸು ದಾಖಲಾಗಿತ್ತು. ಅವರಲ್ಲಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಸುರೇಶ್, ಆರು ಜನರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ 25 ಮಂದಿಯನ್ನು ಖುಲಾಸೆಗೊಳಿಸಿದ್ದಾರೆ. ಉಳಿದ ನಾಲ್ವರು ವಿಚಾರಣೆ ವೇಳೆ ಮೃತಪಟ್ಟಿದ್ದಾರೆ.
ಎಲ್ಲ ಆರೋಪಿಗಳನ್ನು ಕೊಯವiತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

Call Now Button