Online News in ಕನ್ನಡ

ಬುದ್ಧನನ್ನು ಅನುಸರಿಸದವರು ಅಂಬೇಡ್ಕರ್ ದ್ರೋಹಿಗಳು….

ಹಿಂದೂ ಧರ್ಮ ಜಾತಿಯನ್ನು ಒಪ್ಪಿಕೊಂಡಿದೆ,  ಬೌದ್ದ ಧರ್ಮ ಪ್ರೀತಿಯನ್ನು ಅಪ್ಪಿಕೊಂಡಿದೆ

ಕೆ.ದೀಪಕ್,
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆಯುತ್ತಿರುವ ‘ಮಾನವ ಮೈತ್ರಿ ಸಂಪದ ‘ ಸಮ್ಮೇಳನವು ವಿಶ್ವಜ್ಞಾನಿ ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಆಶಯದ ಶೋಷಿತರ ವಿಮೋಚನೆಯ ರಥ ಮುಂದಕ್ಕೆ ಎಳೆಯುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ.
ಪತ್ರಕರ್ತನಾಗಿ ಕಳೆದ 27 ವರ್ಷಗಳಲ್ಲಿ ‘ ವಿಶ್ವ ವಿಜ್ಞಾನಿ’ ಬುದ್ಧ ಕುರಿತಾದ ಸುದೀರ್ಘ ಚಿಂತನ-ಮಂಥನ ಮೈಸೂರಿನಲ್ಲಿ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆಯಿಂದ ನಡೆದಿರುವಂತಃ ಈ ಎರಡು ದಿನಗಳ ಅಂಬೇಡ್ಕರಿಸ್ಟ್ ಮತ್ತು ಬುದ್ಧಿಸ್ಟ್ ಸಮ್ಮೇಳನದಲ್ಲಿ ಈಗಾಗಲೇ ಅನೇಕ ಮಹತ್ವ ವಿಷಯಗಳು ಈ ವೇದಿಕೆಯಲ್ಲಿ ಮಂಡನೆಯಾಗಿದೆ. ವಿಚಾರವಂತರು ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ.

ಇಂದು ಈ ಹೊತ್ತಿನ ಗೋಷ್ಠಿಯಲ್ಲಿ ನನಗಾಗಿ ನೀಡಿರುವ ವಿಷಯ ‘ ಅಂಬೇಡ್ಕರ್ ಅವರು ನೀಡಿದ ಹಕ್ಕು ಅಧಿಕಾರಗಳು ಬೇಕು ಆದರೆ ಧಮ್ಮ…?’ ಎಂಬುವುದಾಗಿ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಉತ್ತರ ಕಂಡುಕೊಳ್ಳುವುದು ಈ ಕಾಲಘಟ್ಟದ ಅನಿವಾರ್ಯ ಎಂಬ ಕಾರಣಕ್ಕಾಗಿಯೇ ಈ ಪ್ರಶ್ನೆ ಎದ್ದಿದೆ ಎಂಬುವುದು ನನ್ನ ಬಲವಾದ ನಂಬಿಕೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನದ ಜತೆಗೆ ನಾವು ಬುದ್ಧನ ಬಳಿಗೆ ತೆರಳಲು ಬದ್ಧತೆಯನ್ನು ತೋರಬೇಕಿದೆ.

ಅಂದ ಹಾಗೆ, ಇಲ್ಲಿ ಹೊಸದಾಗಿ ಹೇಳಬೇಕಾದ ವಿಷಯವೇನೂ ಇಲ್ಲ. ಎಲ್ಲವನ್ನೂ ಮಹಾ ನಾಯಕ ಡಾ.ಅಂಬೇಡ್ಕರ್ ಅವರು ಬರೆದಿಟ್ಟು ಹೋಗಿದ್ದಾರೆ. ಅದನ್ನು ನಭಾರತದ ಅರಿವಿಗೆ ತಂದುಕೊಂಡು ಅನುಸರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಷ್ಟೆ. ಯಾವುದೇ ವಿಷಯದ ಬಗ್ಗೆ ಡಾ. ಅಂಬೇಡ್ಕರ್ ಅವರು ಪೂರ್ವಗ್ರಹ ಪೀಡಿತರಾಗಿ ಬರೆದವರಲ್ಲ, ಹಿಂದು-ಮುಂದು ಯೋಚಿಸದೆ ಮಾತನಾಡಿದವರಲ್ಲ ಅಥವಾ ದಾಖಲೀಕರಿಸಿದವರಲ್ಲ. ದೀರ್ಘ ಕಾಲದ ಅಧ್ಯಯನ ಮತ್ತು ಬದುಕಿನ ಅನುಭವವನ್ನೆಲ್ಲಾ ಧಾರೆಯೆರೆದು ಅಂತಃಕರಣದಿಂದ ಬರೆದಿಟ್ಟು ಹೋಗಿದ್ದಾರೆ. ಹಾಗೂ ಬರೆದಂತೆ ಬದುಕಿ ‘ ನನ್ನ ಜೀವನವೇ ನನ್ನ ಸಂದೇಶ’ ಎಂದು ಸಾರಿದ್ದಾರೆ.

ಆ ಕಾರಣದಿಂದಲೇ ಅವರು ತಮ್ಮ ಬದುಕು, ಬರವಣಿಗೆ ಮತ್ತು ಭಾಷಣಗಳ ಮೂಲಕ ಇಂದಿಗೂ ಎಂದೆಂದಿಗೂ ನಮ್ಮ ನಡುವೆ ಜೀವಂತ್ತವಾಗಿದ್ದಾರೆ ಮತ್ತು ಪ್ರತಿ ದಿನ ಪ್ರತಿ ಕ್ಷಣ ಎತ್ತರೆತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ.
ಸ್ನೇಹಿತರೇ, ಇಲ್ಲಿರುವ ಪ್ರತಿಯೊಬ್ಬರೂ ಡಾ. ಅಂಬೇಡ್ಕರ್ ಅವರನ್ನು ಒಂದು ಹಂತಕ್ಕೆ ಓದಿಕೊಂಡವರೇ ಮತ್ತು ಅವರ ಮೇಲೆ ಅಧಮ್ಯ ಅಭಿಮಾನವನ್ನು ಹೊಂದಿರುವವರೇ ಆಗಿದ್ದೀರಿ.
ಬಹುಶಃ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರು ತಮ್ಮ ಜೀವಮಾನದ ಉದ್ದಕ್ಕೂ ಅವಮಾನಕ್ಕೆ ಒಳಪಟ್ಟಿದ್ದು, ನೊಂದದ್ದು, ಬೆಂದದ್ದು, ಬಸವಳಿದದ್ದೇ ಹೆಚ್ಚು. ನಗುವಿಗಿಂತ ಕಣ್ಣೀರು ಇಟ್ಟ ಕ್ಷಣಗಳೇ ಅಧಿಕ. ಇಂತಹ ಘನಗೋರ, ಕಠೋರ ಕ್ರೌರ್ಯ ತುಂಬಿದ ಸಮಾಜದಲ್ಲಿ ಜೀವಿಸಿದ ಶೋಷಿತರ ಧ್ವನಿ ಡಾ. ಅಂಬೇಡ್ಕರ್ ತಮ್ಮ ಜೀವನದಲ್ಲಿ ಒಂದಷ್ಟು ಸಂತೋಷದ ಕ್ಷಣಗಳನ್ನೂ ಅನುಭವಿಸಿದ್ದಾರೆ. ಅದರಲ್ಲಿ ಬಹಳ ಪ್ರಮುಖವಾದದ್ದು ಅವರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕ್ಷಣವೂ ಒಂದು.

1956, ಅಕ್ಟೋಬರ್ 15ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ನಾಗಪುರದ ಐತಿಹಾಸಿಕ ಭಾಷಣದಲ್ಲಿ `ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದರೂ, ನಾನು ಹಿಂದೂ ಧರ್ಮದಲ್ಲಿ ಸಾಯುವುದಿಲ್ಲ. ಅದನ್ನು ನಾನು ನಿಜವೆಂದು ಸಾಬೀತುಪಡಿಸಿದೆ. ನಾನು ಸಂತೋಷವಾಗಿದ್ದೇನೆ, ನಾನು ಪರಮಾನಂದಗೊಂಡಿದ್ದೇನೆ. ನಾನು ನಕರವನ್ನು ತೊರೆದಿದ್ದೇನೆ. ಇದು ನನ್ನ ಭಾವನೆ. ನನಗೆ ಯಾವುದೇ ಕುರುಡು ಅನುಯಾಯಿಗಳು ಬೇಕಾಗಿಲ್ಲ. ಬೌದ್ಧ ಧರ್ಮಕ್ಕೆ ಬರುವವರು ತಿಳುವಳಿಕೆಯೊಂದಿಗೆ ಬರಬೇಕು. ಅವರು ಪ್ರಜ್ಞಾಪೂರ್ವಕವಾಗಿ ಆ ಧರ್ಮವನ್ನು ಸ್ವೀಕರಿಸಬೇಕು’ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ.

ಪತ್ರಕರ್ತರಾಗಿ 1920ರಲ್ಲಿ ‘ ಮೂಕನಾಯಕ ‘ ಪತ್ರಿಕೆಯನ್ನು ಆರಂಭಿಸಿ ತಮ್ಮ ಮೊದಲ ಸಂಪಾದಕೀಯದಲ್ಲಿ ಮನುಸ್ಮೃತಿಯನ್ನು ಅನುಸರಿಸುವ ಹಿಂದೂ ಧರ್ಮದ ವ್ಯವಸ್ಥೆಯನ್ನು ಸೊಗಸಾಗಿ ದಾಖಲಿಸಿದ್ದಾರೆ. ‘ ಹಿಂದೂ ಎಂಬ ಈ ಧರ್ಮವನ್ನು ರೂಪಿಸಿರುವ ಜಾತಿಗಳು ಏಣಿಶ್ರೇಣಿಯ ರೂಪದಲ್ಲಿ ಶ್ರೇಣಿಕೃತವಾಗಿ ಜೋಡಿಸಲ್ಪಟ್ಟಿದೆ. ಹಿಂದೂ ಸಮುದಾಯವೆಂಬುವುದು ಒಂದು ಗೋಪುರ ಇದ್ದಂತೆ. ಅದರಲ್ಲಿ ಪ್ರತಿಯೊಂದು ಜಾತಿಗೂ ಒಂದೊಂದು ಮಹಡಿಯನ್ನು ಕೊಡಲಾಗಿರುತ್ತದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಮುಖ್ಯವೆಂದರೆ, ಈ ಗೋಪುರದ ಒಂದೊಂದು ಮಹಡಿಯಿಂದ ಮತ್ತೊಂದು ಮಹಡಿಗೆ ಮೆಟ್ಟಿಲುಗಳು ಇರುವುದಿಲ್ಲ. ಅಥವಾ ಏಣಿ ಇರುವುದಿಲ್ಲ.

ಆದ್ದರಿಂದ ಒಂದು ಮಹಡಿಯಲ್ಲಿರುವ ಯಾರೂ ಕೂಡಾ ಮೇಲಿನ ಮಹಡಿಗೆ ಹತ್ತುವ ಅಥವಾ ಕೆಳಗಿನ ಮಹಡಿಗೆ ಇಳಿಯುವ ಸಾಧ್ಯತೆ ಇರುವುದಿಲ್ಲ. ಯಾರು ಯಾವ ಮಹಡಿಯಲ್ಲಿ ಹುಟ್ಟುತ್ತಾರೋ ಅವರು ಅಲ್ಲಿಯೇ ಸಾಯುತ್ತಾರೆ. ಕೆಳಗಿನ ಮಹಡಿಯಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾವಂತ, ಯೋಗ್ಯನಾಗಿದ್ದರೂ ಆತ ಮೇಲಿನ ಮಹಡಿಗೆ ಹತ್ತುವ ಯಾವುದೇ ಮಾರ್ಗ ಇರುವುದಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿ ಯಾವುದೇ ಬಗೆಯ ಪ್ರತಿಭೆ ಅಥವಾ ಜ್ಞಾನವನ್ನೂ ಹೊಂದಿದವನಲ್ಲದಿದ್ದರೂ ತಾನು ಹುಟ್ಟಿರುವ ಮತ್ತು ತನಗೆ ವಹಿಸಲ್ಪಟ್ಟಿರುವ ಮಹಡಿಯಿಂದ ಕೆಳಗಿನ ಮಹಡಿಗೆ ಆತನನ್ನು ಇಳಿಸಲು ಯಾವ ಸಾಧ್ಯತೆ ಇರುವುದಿಲ್ಲ’ ಎಂದು ವಿಮರ್ಶಿಸಿದ್ದಾರೆ. ಅಂಬೇಡ್ಕರ್ ಅವರ ಈ ಆಲೋಚನೆಯ ಅರಿವು ನಮಗೆ ಆಗಿದೆಯೆ ? ಪ್ರಶ್ನಿ ಮಾಡಿಕೊಳ್ಳಿ.

ಇಂದು ನೀವು ಯಾವುದೇ ವ್ಯಕ್ತಿಯನ್ನು ಗಮನಿಸಿ, ಭಾರತದ ನೆಲದಿಂದ ಹೊರಗೆ ನಿಂತು ಮಾತನಾಡುವಗ ‘ ಐ ಕಮ್ ಫ್ರಮ್ ಲ್ಯಾಂಡ್ ಆಫ್ ಬುದ್ಧ’ ಎಂದು ಹೇಳಿಕೊಳ್ಳುತ್ತಾರೆ. ಅದರೆ, ಬುದ್ಧನ ನೆಲ ಇಂದು ಯುದ್ಧದ ನೆಲವಾಗಿದೆ. ಜಾತಿ ಸಂಘರ್ಷ, ಧರ್ಮ ಸಂಘರ್ಷ, ವರ್ಗ ಸಂಘರ್ಷದಿಂದ ನೀಲಿ ಭಾರತ ಕೇಸರಿ ಬಣ್ಣವಾಗಿದೆ. ಶಾಂತ ಮೂರ್ತಿಯ ಮೇಲೆ ಹಿಂಸೆಯ ರಾಮ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಇದಕ್ಕೆ ತಾಜಾ ಉದಾಹರಣೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ವೇಳೆ ಭೂಮಿ ಅಗೆದಾಗ ದೊರಕಿದ ಬೌದ್ಧ ಗುರುಹುಗಳು, ಅವಶೇಷಗಳೇ ಸಾಕ್ಷಿ. ಇದನ್ನು ನಾಶ ಮಾಡಲಾಗುತ್ತಿದೆ, ಇದನ್ನು ರಕ್ಷಿಸಬೇಕೆಂದು ವಿಶ್ವ ಪ್ರಾಚ್ಯವಸ್ತು ಸಂಸ್ಥೆಗೆ ಮನವಿ ಮಾಡಿದ್ದನ್ನು ನೆನಪು ಮಾಡಿಕೊಳ್ಳಿ.

ಹಿಂದೂ ಮೂಲಭೂತವಾದಿಗಳು ದೇಶದಲ್ಲಿ ಒಂದು ಭಾವನಾತ್ಮಕ ವಿಷಯವನ್ನು ಹೇಳುತ್ತಿದ್ದಾರೆ. ಭಾರತದಲ್ಲಿ `ಮುಸ್ಲಿಂರ ಜನ ಸಂಖ್ಯೆ ಹೆಚ್ಚಾದರೆ, ಹಿಂದೂಗಳಿಗೆ ಅಪಾಯ ತಪ್ಪಿದ್ದಲ್ಲ’ ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ. ಹಿಂದೂಗಳ ಹಕ್ಕು ಅಧಿಕಾರ, ಆಸ್ತಿ, ಸಂಸ್ಕೃತಿ, ಜೀವನ ನಾಶವಾಗಲಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಹಿಂದೂ ಧರ್ಮ ಜಾತಿ ವ್ಯವಸ್ಥೆಯೊಳಗೆ ಈ ನೆಲದ ಮೂಲ ನಿವಾಸಿಗಳಾದ ಆದಿವಾಸಿ, ಶೋಷಿತ, ಅಸ್ಪೃಶ್ಯ, ದಲಿತರಿಗೆ 2 ಸಾವಿರ ವರ್ಷಗಳಿಂದ ಕೊಟ್ಟ ಹಕ್ಕು, ಅಧಿಕಾರ, ಆಸ್ತಿ, ಗೌರವ, ಸ್ಥಾನಮಾನ ಏನು ? ಎಂಬ ಪ್ರಶ್ನೆಗೆ ಅವರಿಂದ ನಮಗೆ ಉತ್ತರ ಸಿಗಲು ಸಾಧ್ಯವೇ ? ಈ ದೇಶದಲ್ಲಿ ಮುಸ್ಲಿಂರ ಜನಸಂಖ್ಯೆ ಹೆಚ್ಚಾದರೆ, ಹಿಂದುಗಳಿಗೆ ಅಪಾಯ ಬರಲಿದೆ ಎನ್ನುವ ಮಾತು ಅವರ ಪ್ರಕಾರ ಸತ್ಯವಾದರೆ, ಹಿಂದೂಗಳ ಸಂಖ್ಯೆ ಹೆಚ್ಚಾದರೆ ಅದರೊಳಗೆ ಬದುಕುತ್ತಿರುವ ಶೂದ್ರರು, ಅಸ್ಪಶ್ಯರಿಗೆ ಅಪಾಯ ಇಲ್ಲವೇ ?

ಇಲ್ಲವೆಂದಾರೆ, ನಾನು ಕೊಡುವ ಸಾಕ್ಷಿಗಳಿಗೆ ಉತ್ತರ ಕೊಡಿ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಈ ದೇಶದಲ್ಲಿ ದಲಿತರು, ಅಸ್ಪಶ್ಯರ ಸಾಮೂಹಿಕ ಹತ್ಯೆಕಾಂಡಳು, ಸಾಮೂಹಿಕ ಅತ್ಯಾಚಾರಗಳು, ಕೊಲೆ, ಹಲ್ಲೆ, ಬೆತ್ತಲೆ, ಸಾಮಾಜಿಕ ಬಹುಷ್ಕಾರಗಳ ಘಟನೆಗಳು ಹೇಳುತ್ತಾ ಹೋದರೆ, ದಿನಗಳು, ವರ್ಷಗಳೂ ಸಾಲುವುದಿಲ್ಲ. ಸ್ವಾತಂತ್ರ್ಯ ನಂತರದ ಘಟನೆಗಳನ್ನು ಮೆಲಕು ಹಾಕಿದರೆ.

1957ರಲ್ಲಿ ತಮಿಳುನಾಡಿನಲ್ಲಿ ನಡೆದ ರಾಮನಾಡ್ ಗಲಭೆಯಲ್ಲಿ 52 ಮಂದಿ ದಲಿತರನ್ನು ಕೊಂದ ಪ್ರಕರಣ. 1968ರಲ್ಲಿ ಕಿಲ್ವೆನ್‍ಮಣಿ ಹತ್ಯೆಕಾಂಡದಲ್ಲಿ ಕೂಲಿ ಹೆಚ್ಚು ಮಾಡುವಂತೆ ಕೇಳಿದ ಕಾರಣಕ್ಕೆ 44 ದಲಿತ ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಿದ ಘಟನೆ. 1978ರಲ್ಲಿ ವೆಲ್ಲುಪುರಂನಲ್ಲಿ ನೂರಕ್ಕೂ ಹೆಚ್ಚು ದಲಿತರ ಮನೆಗಳಿಗೆ ಬೆಂಕಿ ಹಚ್ಚಿ 12 ಮಂದಿಯನ್ನು ಹತ್ಯೆ ಮಾಡಿ, ಹೆಣ್ಣು ಮಕ್ಕಳ ಮಾನ ಬಂಗ ಮಾಡಿದ ಘಟನೆ. 1981ರಲ್ಲಿ ಉತ್ತರ ಪ್ರದೇಶದಲ್ಲಿ ಪೂಲನ್ ದೇವಿಯ ಮೇಲೆ ನಡೆದ ದೌರ್ಜನ್ಯ, 1985ರಲ್ಲಿ ಆಂದ್ರ ಪ್ರದೇಶದ ಕರಮಚೇದುವಿನಲ್ಲಿ ನಡೆದ ಮಾದಿಗ ಸಮುದಾಯದ ಜನರ ಹತ್ಯಾಕಾಂಡ. 1991ರಲ್ಲಿ ಆಂಧ್ರ ಪ್ರದೇಶದಲ್ಲಿ 8 ಮಂದಿ ದಲಿತರ ಸಾಮೂಹಿಕ ಹತ್ಯೆ ಮತ್ತು 300ಕ್ಕೂ ಹೆಚ್ಚು ಮನೆಗಳ ಧ್ವಂಸ ಪ್ರಕರಣ. 1996ರಲ್ಲಿ ಬೀಹಾರದಲ್ಲಿ ಮೇಲ್ವರ್ಗದ ರಣವೀರ್ ಸೇನೆಯು 21 ಮಂದಿ ದಲಿತರನ್ನು ಹತ್ಯೆ ಮಾಡಿದ್ದು, 1997ರಲ್ಲಿ ತಮಿಳುನಾಡಿನ ಮದುರೈನಲ್ಲಿ ನಡೆದ 6 ಮಂದಿಯನ್ನು ಕೊಂದಿದ್ದು ( ಈ ಪ್ರಕರಣದಲ್ಲಿ ವಿಚಿತ್ರವೇನು ಗೊತ್ತೆ ? ಇವರ್ಯಾರು ಹೋರಾಟ ಮಾಡಿದವರಲ್ಲ, ಹಕ್ಕು ಕೇಳಿದವರಲ್ಲ, ಬಾವಿಯಲ್ಲಿ ನೀರು ಕುಡಿದವರಲ್ಲ, ದೇವಸ್ಥಾನ ಪ್ರವೇಶ ಮಾಡಿದವರಲ್ಲ, ಅನ್ಯ ಜಾತಿಯ ಹೆಣ್ಣು ಮಗಳನ್ನು ಪ್ರೀತಿಸಿದವರಲ್ಲ, ಬದಲಿಗೆ ಮದುರೈನ ಮೆಲ್ಲೂರು ಪಂಚಾಯ್ತಿ ಸಾಮಾನ್ಯ ಕ್ಷೇತ್ರವಾಗಿದ್ದನ್ನು ಪರಿಶಿಷ್ಟ ಜಾತಿಗೆ ಮೀಸಲು ಮಾಡಿದ್ದು ಹತ್ಯೆಗೆ ಕಾರಣ)

ಇನ್ನು ಬಿಹಾರದಲ್ಲಿ ಮುಂದುವರೆಗೆ 1997ರಲ್ಲಿ ರಣವೀರ್ ಸೇನೆ 58 ಮಂದಿ ದಲಿತರ ಕತ್ತು ಕತ್ತರಿಸಿ ಹತ್ಯೆ ಮಾಡಲಾಯಿತು. ಇದರಲ್ಲಿ 27 ಮಂದಿ ಮಹಿಳೆಯರು, 10 ಮಂದಿ ಮಕ್ಕಳಿದ್ದರು. ಇಂತಹ ನೂರಾರು ಪ್ರಕರಣ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದು ಹೋಗಿದೆ.
ಇನ್ನು ಕರ್ನಾಟಕಕ್ಕೆ ಬರುವುದಾದರೆ, 2000 ಇಸವಿಯಲ್ಲಿ ಕೋಲಾರದ ಕಂಬಾಲಪಳ್ಳಿ ಪ್ರಕರಣ, ಮನೆಯ ಹೊರಗಿನಿಂದ ಬೀಗ ಹಾಕಿ, ಮನೆಗೆ ಬೆಂಕಿ ಹಚ್ಚಿ 7 ಮಂದಿ ದಲಿತರನ್ನು ಸಜೀವವಾಗಿ ದಹಿಸಲಾಯಿತು. 2011ರಲ್ಲಿ ನಡೆದ ಹರಿಯಾಣ ಪ್ರಕರಣ, ಧರ್ಮಾಪುರಿಯಲ್ಲಿ ನಡೆದ ಜಾತಿ ಗಲಭೆ, 2016ರಲ್ಲಿ ಅಲಿಯೂರು ಸಾಮೂಹಿಕ ಅತ್ಯಾಚಾರ ಪ್ರಕರಣ, ಈಗ 2018ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೊರೊಗಾಂ ಹಿಂಸಾಚಾರ, ಇನ್ನು ಈ ವರ್ಷ ಅಟ್ರಾಸಿಟಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ದೇಶವ್ಯಾಪಿ ನಡೆದ ಪ್ರತಿಭಟನೆಯಲ್ಲಿ 14 ಮಂದಿ ದಲಿತರ ಪ್ರಾಣ ಬಿಟ್ಟರು.

ಮುಂದುವರೆದು, ಜಾತಿಯತೆಯ ಮತ್ತೊಂದು ತಾಜಾ ಮತ್ತು ಮಹತ್ವದ ಉದಾಹರಣೆ ಅಂದ್ರೆ, 2024ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನ ಮಾಡಲಿಲ್ಲ. ಕಾರಣ, ಆಕೆ ಆದಿವಾಸಿ ಮಹಿಳೆ. ಗೊಲ್ಲರ ಹಟ್ಟಿಗೆ ಸಂಸದರನ್ನೇ ಒಳಗೆ ಬಿಡಲಿಲ್ಲ. 2022ರಲ್ಲಿ ದೇಶದಾದ್ಯಂತ 51,656 ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದೆ. ಇನ್ನು ಊರಿನ ಹಂತದಲ್ಲೇ, ಮುಖ್ಯಸ್ಥರ ಹಂತದಲ್ಲಿಯೇ, ಪೊಲೀಸರ ಹಂತದಲ್ಲಿಯೇ, ಪ್ರಭಾವಿಗಳ ಹಂತದಲ್ಲಿಯೇ ಸಾವಿರಾರು ಪ್ರಕರಣಗಳು ದಾಖಲೆಯಾದೆ ಉಳಿದಿದೆ.

ಇಂಡಿಯನ್ ಕ್ರೈಮ್ ರಿಪೋರ್ಟ್ ಬ್ಯೂರೋ ಪ್ರಕಾರ ಪ್ರತಿ ವರ್ಷ ಸುಮಾರು 45 ಸಾವಿರಕ್ಕೂ ಹೆಚ್ಚು ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದು, ಪ್ರತಿ 18 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಮತ್ತು ಒಂದು ವಾರಕ್ಕೆ 13 ದಲಿತರ ಹತ್ಯೆ, ಪ್ರತಿ ದಿನ 27 ಅಟ್ರಾಸಿಟಿ ಪ್ರಕರಣಗಳು ದಾಖಲಾಗುತ್ತಿದೆ. ಕೇವಲ ಜಾತಿಗಾಗಿ ನಡೆಯುತ್ತಿರುವ ಈ ದೌರ್ಜನ್ಯಗಳನ್ನು ಇನ್ನೂ ಹೆಚ್ಚು ವರ್ಷ ಸಹಿಸಿಕೊಳ್ಳುತ್ತೀರಿ ಹೇಳಿ.
ಆಕಾರಣದಿಂದಲೇ ಹಿಂದೂ ಧರ್ಮದಿಂದ ಹೊರ ಬಂದ ಮೇಲೆ ಅಂಬೇಡ್ಕರ್ ಅವರು ಹೇಳಿದ್ದು ನಾನು ನರಕದಿಂದ ಹೊರಬಂದೆ ಅಂತ.

ಈಗ ವಿಷಯಕ್ಕೆ ಬರೋಣ ಡಾ. ಅಂಬೇಡ್ಕರ್ ಅವರು ನೀಡಿರುವ ಹಕ್ಕು ಅಧಿಕಾರ ಬೇಕು ಆದರೆ ಧಮ್ಮ…?
ಈ ದೇಶದ ಶೋಷಿತರಿಗೆ ಅಂಬೇಡ್ಕರ್ ಕೊಟ್ಟ ಹಕ್ಕುಗಳೇನು ? ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿಯ ಕಾರಣಕ್ಕೆ ಯಾವ ಯಾವ ಹಕ್ಕುಗಳನ್ನು ನಿರಾಕರಿಸಲಾಗಿತ್ತೋ ಆ ಎಲ್ಲ ಹಕ್ಕುಗಳನ್ನು ಅಂಬೇಡ್ಕರ್ ಶ್ರಮದ ಫಲವಾಗಿ ನಮಗೆ ದೊರಕಿದೆ. ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು, ನ್ಯಾಯದ ಹಕ್ಕು ಆ ಮೂಲಕ ಶಿಕ್ಷಣ ದೊರಕಿದೆ, ಉದ್ಯೋಗ ದೊರಕಿದೆ, ಭೂಮಿ, ಆಸ್ತಿ ಸಂಪತ್ತು ಗಳಿಸಲು ದಾರಿಯಾಗಿದೆ. ಆಮೂಲಕ ಸ್ವಾಭಿಮಾನದಿಂದ, ಗೌರವದಿಂದ ಬದುಕು ನಡೆಸುವಂತ್ತಾಗಿದೆ. ತನ್ನ ತಂದೆಯ ತಂದೆ ದೊಡ್ಡ ಮಾರಯ್ಯ ಹೇಗಿದ್ರು, ನಮ್ಮಪ್ಪ ಕೃಷ್ಣಪ್ಪ ಹೇಗೆ ಬದುಕಿದರು, ನಾನು ದೀಪಕ್ ಹೇಗೆ ಬದುಕುತ್ತಿದ್ದೇನೆ ಎಂದು ಒಮ್ಮೆ ಯೋಜಿಸಿದರೆ ಸಾಕು. ಅಂಬೇಡ್ಕರ್ ಕೊಟ್ಟ ಹಕ್ಕು ಅಧಿಕಾರದ ಏನೆಂದು ತಿಳಿಯುತ್ತದೆ.

ಭೂಮಿಯ ಮೇಲೆ ನೆರಳೂ ಬೀಳಬಾರದು ಎಂದು ಬಯಸಿದ್ದ ದೇಶದಲ್ಲಿ ರಾಜ್ಯಾಂಗಕ್ಕೆ ಬರುವುದಾದರೆ, ದಲಿತರು ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನದಿಂದ ಹಿಡಿದು ರಾಷ್ಟ್ರಪತಿ ಸ್ಥಾನದವರೆಗೂ ತಲುಪಿದ್ದಾರೆ. ಉಪ ಪ್ರಧಾನಿಯಾಗಿದ್ದಾರೆ, ಮುಖ್ಯಮಂತ್ರಿ ಆಗಿದ್ದಾರೆ, ಸಚಿವರು, ಸಂಸದರು, ಶಾಸಕರು ಆಗಿದ್ದಾರೆ. ಕಾರ್ಯಾಂಗಕ್ಕೆ ಬರುವುದಾದರೆ, ಡಿ ಗ್ರೂಪ್‍ನಿಂದ ಡಿಸಿಯವರೆಗೂ, ಕ್ಲರ್ಕ್ ನಿಂದ ಕಲೆಕ್ಟರ್ ವರೆಗೂ, ಪಿಸಿಯಿಂದ ಪೊಲೀಸ್ ಮಹಾ ನಿರ್ದೇಶಕರ ಸ್ಥಾನದವರೆಗೂ, ವಿಚಕ್ಷಣ ದಳದ ಸಿಬ್ಬಂದಿಯಿಂದ ವಿಜ್ಞಾನಿಯವರೆಗೂ, ದಲಿತರು ಡಾಕ್ಟರ್, ಇಂಜಿನಿಯರ್, ಪ್ರೊಫೆಸರ್, ಉದ್ಯಮಿಗಳಾಗಿದ್ದಾರೆ. ನ್ಯಾಯಾಂಗ ವ್ಯವಸ್ಥೆಗೆ ಬರುವುದಾದರೆ, ನ್ಯಾಯವಾದಿಗಳಿಂದ ನ್ಯಾಯಾಧೀಶರವೆಗೂ, ಮಾಧ್ಯಮ ರಂಗಕ್ಕೆ ಬರುವುದಾದರೆ, ಪತ್ರಿಕೆ ವಿತರಕರಿಂದ ಪತ್ರಿಕಾ ಸಂಪಾದಕರವರೆಗೂ ದಲಿತರನ್ನು ನಾನು ಕಾಣಬಹುದು.
ಇನ್ನು ಸಹಜ ಜೀವನದ ಕಡೆಗೆ ಬರುವುದಾದರೆ, ತುಂಡು ಬಟ್ಟೆ ತೊಡುತ್ತಿದ್ದ ಜನ ಬ್ರಾಂಡಡ್ ಸೂಟ್‍ಗಳನ್ನು ಧರಿಸುತ್ತಿದ್ದಾರೆ, ಬರಿಗಾಲಲ್ಲಿ ನಡೆಯುತ್ತಿದ್ದ ಜನ ಬೂಟುಗಳನ್ನು ಧರಿಸಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಊರಾಚೆಯ ಗುಡಿಸಲಿನಲ್ಲಿ ಬದುಕಿದ್ದ ಜನ ಮೆಟ್ರೋಪೋಲ್ ಸಿಟಿಗಳ ಬಂಗಲೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಬರಿಗಾಲಲ್ಲಿ ನಡೆಯುತ್ತಿದ್ದವರು ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಮಡಿಕೆ ಕಟ್ಟಿಸಿಕೊಳ್ಳುತ್ತಿದ್ದ ಕೊರಳುಗಳಿಗೆ ಚಿನ್ನದ ಸರ ಬಂದಿದೆ, ಪೊರಕೆ ಕಟ್ಟಿಸಿಕೊಳ್ಳುತ್ತಿದ್ದ ಸೊಂಟಕ್ಕೆ ಬೆಲ್ಟ್ ಬಂದಿದೆ. ಅನ್ಯರ ಜಮೀನುಗಳಲ್ಲಿ ಜೀತ ಮಾಡುತ್ತಿದ್ದ ಜನರು ಜಮಿನುದಾರರಾಗಿದ್ದಾರೆ. ತುತ್ತು ಅನ್ನಕ್ಕೆ ಭಿಕ್ಷೆ ಬೇಡುತ್ತಿದ್ದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕೇವಲ ನೇಗಿಲು, ಕೊಡಲಿ, ಆರೆ, ಪೊರಕೆ ಹಿಡಿಯುತ್ತಿದ್ದ ಕೈಗಳು ಇಂದು ಪೆನ್ನು, ಫೋನು ಹಿಡಿದು ಫರ್ಮಾನು, ಕಾನೂನು, ನೀತಿ ನಿಯಮಗಳಿಗೆ ರುಜು ಹಾಕುತ್ತಿವೆ.
ಇದೆಲ್ಲವೂ ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟ ಭಿಕ್ಷೆ ಎಂದು ನಾವು ಭಾವಿಸದಿದ್ದರೆ ನನಮಗಿಂತ್ತಲೂ ಅಂಬೇಡ್ಕರ್ ದ್ರೋಹಿಗಳು, ಜನಾಂಗ ದ್ರೋಹಿಗಳು, ದಲಿತ ದ್ರೋಹಿಗಳು ಮತ್ತೊಬ್ಬರು ಇರಲು ಸಾಧ್ಯವೇ ಇಲ್ಲ.
ಒಟ್ಟಾರೆ, ಭಾರತ ಎಂದಿಗೂ ಊಹಿಸಿಕೊಳ್ಳಲಾಗದ, ಮನುವಾದಿಗಳು ಎಂದಿಗೂ ಕಲ್ಪಿಸಿಕೊಳ್ಳಲಾಗದ್ದನ್ನು ಡಾ. ಅಂಬೇಡ್ಕರ್ ತಮ್ಮ ಜ್ಞಾನದ ಮೂಲಕ ಭಾರತದ ಭವಿಷ್ಯವನ್ನೇ ಬದಲಿಸಿ ಹೋಗಿದ್ದಾರೆ. ಕೇವಲ ಅಂಬೇಡ್ಕರ್ ಅವರ ಭಾಷಣ, ಬರಹ ಓದಿಕೊಂಡು ನಾವೂ ನಾಲ್ಕು ಅಕ್ಷರ ಬರೆದು, ಭಾಷಣ ಮಾಡಿ ಹೋದರೆ ಸಾಕೆ ? ಅಥವಾ ಮನೆಗೊಂದು ಫೋಟೋ, ಊರಿಗೊಂದು ಪ್ರತಿಮೆ ಬಂದರೆ ಸಾಕೇ ? ಖಂಡಿತವಾಗಿಯೂ ಸಾಲುವುದಿಲ್ಲ. ಭಾಷಣ ಮತ್ತು ಬರಹದ ಜೊತೆಗೆ ಡಾ. ಅಂಬೇಡ್ಕರ್ ಅವರ ಭಾವನೆಯನ್ನೂ ಅರಿತು ನಾವು ನಡೆಯಬೇಕಿದೆ. ಅದರಲ್ಲಿ ಬದುಕಿನಲ್ಲಿ ಅವರು ಕಂಡ ಸಂತೋಷದ ಕ್ಷಣ ಅದು ಬೌದ್ಧ ಧರ್ಮಕ್ಕೆ ಮತಾಂತರದ ಕ್ಷಣ.

ಹಿಂದೂ ಧರ್ಮ ಅಜ್ಞಾನದ ತಳ ಹದಿಯ ಮೇಲೆ ನಿಂತಿದ್ದರೆ, ಬೌದ್ಧ ಧರ್ಮ ವಿಜ್ಞಾನದ ತಳ ಹದಿಯ ಮೇಲೆ ನಿಂತಿದೆ. ಬುದ್ಧ ಓರ್ವ ಸಮಾಜ ವಿಜ್ಞಾನಿ.
ಹಿಂದೂ ಧರ್ಮ ಅಸಮಾನತೆಯನ್ನು ಪೋಷಕ, ಬೌದ್ಧ ಧರ್ಮ ಸಮಾನತೆಯ ಜೋತಕ.
ಹಿಂದೂ ಧರ್ಮ ಜಾತಿಯನ್ನು ಅಪ್ಪಿಕೊಂಡಿದ್ದರೆ, ಬೌದ್ದ ಧರ್ಮ ಪ್ರೀತಿಯನ್ನು ಒಪ್ಪಿಕೊಂಡಿದೆ.
ಹಿಂದೂ ಧರ್ಮ ಮನುಷ್ಯರನ್ನು ಕೆಲಸದ ಮೇಲೆ, ಜಾತಿಯ ಮೇಲೆ, ಲಿಂಗದ ಮೇಲೆ ವಿಭಜನೆ ಮಾಡಿದರೆ, ಬೌದ್ಧ ಧರ್ಮ ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿದೆ.

ಒಂದು ಮಾತನ್ನು ನೋವಿನಿಂದ ಹೇಳಲೇ ಬೇಕು. ಡಾ. ಅಂಬೇಡ್ಕರ್ ನೀಡಿದ ಹಕ್ಕು ಅಧಿಕಾರವನ್ನು ಪಡೆದು ಬೌದ್ಧ ಧರ್ಮಕ್ಕೆ ಬರದಿದ್ದರೆ, ನೀವು ಸೂಟು ಬೂಟು ಹಾಕಿಕೊಂಡರೂ, ಬಂಗಲೆಗಳಲ್ಲಿ ವಾಸಿಸಿದರೂ, ಆಯಾ ಕಟ್ಟಿನ ಸ್ಥಳಗಳಲ್ಲಿ ಅಧಿಕಾರ ಅನುಭವಿಸುತ್ತಿದ್ದರೂ ನಿಮಗೆ ಇರುವ ಹೊಲೆಯ, ಮಾದಿಗ, ಕೊರಮ, ಕ್ವಾಚ ಹೆಸರು ಬದಲಾಗಲ್ಲ‌. ಇದರಿಂದ ನೀವು ಅಂದು ದಲಿತರು ಬಟ್ಟೆ ಇಲ್ಲದೆ ಬೆತ್ತಲಾಗಿದ್ದರೆ, ಇಂದು ನೀವು ಬಟ್ಟೆ ತೊಟ್ಟು ಬೆತ್ತಲಾಗಿರುತ್ತೀರಿ ಎನ್ನುವುದುದು ನನ್ನ ಅಭಿಪ್ರಾಯ.
ಓಟಿಗಾಗಿ ದೇವಸ್ಥಾನಕ್ಕೆ ಹೋಗುವ ದಲಿತ ರಾಜಕಾರಣಿಗಳು, ಅಧಿಕಾರಕ್ಕಾಗಿ ಮಠಗಳನ್ನು ಓಲೈಸುವ ದಲಿತ ಜನಪ್ರತಿನಿಧಿತಗಳು, ಕುಲಪತಿಗಳಾಗಬೇಕೆಂಬ ಆಸೆಗೆ ಸಂಘಿಗಳಿಗೆ ಬಕೆಟ್ ಹಿಡಿಯುವ ಸುಶಿಕ್ಷಿತರು ತಮಗೆ ತಾವೇ ಆತ್ಮವಂಚನೆ ಮಾಡಿಕೊಂಡಂತೆ.
ಕಡೆಯ ಮಾತು, ಈ ದೇಶದ ಶೋಷಿತ, ಅಸ್ಪೃಶ್ಯ , ಬಹಿಷ್ಕೃತರು ಆತ್ಮಗೌರವದಿಂದ ಬದುಕಬೇಕಾದರೆ, ‘ನೀನು ಕೀಳು ಜಾತಿ’ ಎಂಬ ದೂಷಣೆಯಿಂದ ಮುಕ್ತಿ ಹೊಂದಿ ‘ ನೀನೂ ಮನುಷ್ಯ’ ಎಂದು ಪರಿಗಣಿಬೇಕಾದರೆ ಬುದ್ಧ ಮಾರ್ಗ, ದಮ್ಮ ಮಾರ್ಗ, ಅಂಬೇಡ್ಕರ್ ಮಾರ್ಗ ಒಂದೇ ಪರಿಹಾರ.

 

Call Now Button