ಮೈಸೂರು: ʻಫಿಟ್ ಮೈಸೂರ್ʼ ಘೋಷಣೆಯಡಿ ಮೈಸೂರು ವಿಶ್ವ ವಿದ್ಯಾನಿಲಯ, ಜಿಲ್ಲಾಡಳಿತ, ನಗರಪಾಲಿಕೆ ಮತ್ತು ಜಿಎಸ್ಎಸ್-ಸಿಎಸ್ಆರ್ ಸಂಸ್ಥೆ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ನಡೆದ ವಾಕಥಾನ್ ಅಭೂತಪೂರ್ವ ಯಶಸ್ಸಿ ಕಂಡಿದೆ. ಆಮೂಲಕ ಯೋಗಾ ಪ್ರದರ್ಶನದಲ್ಲಿ ದಾಖಲೆ ನಿರ್ಮಿಸಿದ್ದ ಮೈಸೂರು ಆರೋಗ್ಯದ ನಡಿಗೆಯಲ್ಲಿ ಹೊಸ ಹೆಜ್ಜೆ ಗುರುತನ್ನು ಮೂಡಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ಓಪನ್ ಏರ್ ಥಿಯೇಟರ್ನಲ್ಲಿ ಇಂದು ಮುಂಜಾನೆ ನಡೆದ ʻನಮ್ಮ ನಡಿಗೆ ಆರೋಗ್ಯದ ಕಡೆಗೆʼ ವಾಕಥಾನ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹಾದೇವಪ್ಪ ಚಾಲನೆ ನೀಡಿದರು. ಇದಕ್ಕು ಮುನ್ನ ಮಾತನಾಡಿದ ಅವರು, ಮೈಸೂರು ನಗರದ ತನ್ನ ಅಥಿತ್ಯ ಮತ್ತು ಸ್ವಚ್ಛತೆಗೆ ಹೆಸರಾಗಿದ್ದು ಇವು ನಿರಂತರವಾಗಿ ಸಾಕಾರಗೊಳ್ಳಬೇಕಾದಲ್ಲಿ ನಾನು ಆರೋಗ್ಯದಿಂದ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹೃದ್ರೋಗ ಸಮಸ್ಯೆಗಳು ಕಂಡು ಬಂರುತ್ತಿದೆ. ಅದಕ್ಕಾಗಿ ನಮ್ಮ ಆರೋಗ್ಯದ ಗುಟ್ಟನ್ನು ಕಂಡುಕೊಳ್ಳಲು ನಿತ್ಯ ವಾಕಿಂಗ್ ಮಾಡುವುದು ಬಲು ಮುಖ್ಯ ಎಂದು ತಿಳಿಸಿದರು.

ʻಫಿಟ್ ಮೈಸೂರ್ʼ ರೂವಾರಿ, ಜಿಎಸ್ಎಸ್ ಮತ್ತು ಸಿಎಸ್ಆರ್ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಮಾತನಾಡಿ, ವಾಕಿಂಗ್ ಮಾಡಲು ಹಣ ಖರ್ಚು ಮಾಡುವಂತ್ತಿಲ್ಲ. ಜಾತಿ, ಧರ್ಮ, ವಯೋಮಿತಿಯ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳಬಹುದಾದ ಪ್ರಕ್ರಿಯೆ ಇದು. ಗ್ರೀನ್ ಮೈಸೂರ್, ಕ್ಲೀನ್ ಮೈಸೂರ್ ಮತ್ತು ಫಿಟ್ ಮೈಸೂರ್ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಕರೆ ನೀಡಿದರು.

ಚಾಮರಾಜನಗರ ಸಂಸದ ಸುನೀಲ್ ಬೋಸ್, ಚಾಮರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ವಿವಿ ಕುಲಪತಿ ಪ್ರೊ. ಲೋಕನಾಥ್, ಕುಲಸಚಿವರಾದ ಎಂ.ಕೆ.ಸವಿತಾ, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪಂಚಾಯ್ತಿ ಸಿಇಓ ಎಸ್. ಯುಕೇಶ್ ಕುಮಾರ್, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಸುಂದರ್ ರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಧ್ಯಕ್ಷ ಕೆ.ದೀಪಕ್, ಮಾಜಿ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮೊದಲಾದವರು ಹಾಜರಿದ್ದರು.

ಮೈಸೂರು ವಿವಿಯ ಬಯಲು ರಂಗಮಂದಿರದಿಂದ ಆರಂಭಗೊಂಡ ವಾಕಥಾನ್ ಕುಕ್ಕರಹಳ್ಳಿ ಕೆರೆ ರಸ್ತೆ, ಸರಸ್ವತಿಪುರಂ ಫೈಯರ್ ಬ್ರಿಗೆಡ್ ರಸ್ತೆ, ಥಿಯೋಬಾಲ್ಡ್ ರಸ್ತೆ, ಹುಣಸೂರು ರಸ್ತೆ ಮೂಲಕ ಮತ್ತೆ ಗಂಗೋತ್ರಿ ಆವರಣದಲ್ಲಿ ಅಂತ್ಯಗೊಂಡಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ವಾಕಥಾನ್ನಲ್ಲಿ ಭಾಗವಹಿಸಿದ್ದರು. ಎಲ್ಲ ವಯೋಮಿತಿಯ ಮಂದಿ ಒಟ್ಟಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.


