ಬೆಂಗಳೂರು: ನಾರಾಯಣ ಗುರುಗಳು ಇಡೀ ಸಮಾಜದ ಆಸ್ತಿ. ಅವರು ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದು ಕರೆ ಕೊಟ್ಟವರು. ಇಂದು ನಾವೆಲ್ಲರೂ ಅವರ ಚಿಂತನೆ, ಹೋರಾಟದ ಉದ್ದೇಶವನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಇಂದು ನಾವೆಲ್ಲಾ ಅಶಕ್ತರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಶಕ್ತಿಯನ್ನು ತುಂಬಬೇಕು. ಎಲ್ಲ ಬಡವರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾಜಕ್ಕೆ ಚಲನೆ ದೊರೆಯುತ್ತದೆ. ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ಅವರ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು ಎಂದು ಮುಖ್ಯಮಂತ್ರಿಯವರು ವಿವರಿಸಿದರು.
ಪರ್ಯಾಯ ವ್ಯವಸ್ಥೆ ಹುಡುಕಿದ ಗುರುಗಳು
ನಾರಾಯಣ ಗುರುಗಳು ಪರ್ಯಾಯ ವ್ಯವಸ್ಥೆಯನ್ನು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದವರು. ಮನುಷ್ಯರೆಂದರೆ ಒಂದೇ ಜಾತಿ. ಮೇಲ್ಜಾತಿ ಕೆಳ ಜಾತಿ ಎಂಬುದನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಎಲ್ಲರೂ ಶಿಕ್ಷಣ ಪಡೆಯಲೇಬೇಕು
ಬಸವಣ್ಣವ ವಚನವನ್ನು ಹೇಳುತ್ತಲೇ ಯಾವ ಜಾತಿ ಎಂದು ಕೇಳುತ್ತೇವೆ. ಇದನ್ನು ಹೋಗಲಾಡಿಸಬೇಕಾದರೆ ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಕಸುಬು ಯಾವುದೇ ಇದ್ದರೂ ವಿದ್ಯೆ ಕಲಿಯಲೇಬೇಕು. ವೈದ್ಯರು, ಇಂಜಿನಿಯರ್, ಪ್ರೊಫೆಸರ್, ವಿಜ್ಞಾನಿಗಳಾಗಬೇಕು. ವೈದ್ಯರು, ಇಂಜಿನಿಯರ್ ಅಥವಾ ವಿಜ್ಞಾನಿಗಳಾಗುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಸಾಮರ್ಥ್ಯವಿದೆ. ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ಮುಖ್ಯಮಂತ್ರಿಯಾಗಿಲ್ಲವೆ. ಹುಟ್ಟಿನಿಂದ ಎಲ್ಲವೂ ನಿರ್ಧಾರವಾಗುವುದಿಲ್ಲ. ಅವಕಾಶಗಳು ದೊರೆಯುವುದು ಹಾಗೂ ಅದನ್ನು ಬಳಕೆ ಮಾಡುವುದರ ಮೇಲೆ ನಿರ್ಧಾರವಾಗುತ್ತದೆ. ಜಾಲಪ್ಪ ಅವರು ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಆ ಯೋಚನೆ ಮಾಡದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ
ವಿದ್ಯೆ ಇಲ್ಲದೆ ಹೋಗಿದ್ದರೆ ದೇವರಾಜ ಅರಸು ಅವರನ್ನು ಮೊದಲ್ಗೊಂಡು, ನಾನಾಗಲಿ, ಬಂಗಾರಪ್ಪನವರಾಗಲಿ, ವೀರಪ್ಪ ಮೊಯ್ಲಿ ಅವರಾಗಲಿ, ಎಸ್.ಎಂ ಕೃಷ್ಣ ಅವರಾಗಲಿ, ದೇವೇಗೌಡ ಅವರಾಗಲಿ ಮುಖ್ಯಮಂತ್ರಿಗಳಾಗಲು ಸಾಧ್ಯವಿತ್ತೆ? ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ ಎಂದು ಶಿಕ್ಷಣದ ಮಹತ್ವವನ್ನು ನಾರಾಯಣ ಗುರುಗಳು ಪದೇ ಪದೇ ಹೇಳುತ್ತಿದ್ದರು. ಅವರನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ 2016ರಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಪ್ರಾರಂಭಿಸಿದ್ದು ನಮ್ಮದೇ ಸರ್ಕಾರ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


