ಬೆಂಗಳೂರು: ಕಾಂಗ್ರೆಸ್ನಲ್ಲಿ ನಾಯಕತ್ವ ಮತ್ತೆ ಕರಿಗೆದರಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣ ಬಜೆಟ್ ನಂತರ ದೆಹಲಿಗೆ ತೆರಳಿ ನಾಯಕತ್ವ ಗೊಂದಲ ನಿವಾರಣೆಗೆ ಹೈಕಮಾಂಡ್ ಅವರನ್ನು ಮನವಿ ಮಾಡಲು ನಿರ್ಧರಿಸಿದೆ. ಈಸಂಬಂಧ ನಿನ್ನೆ ರಾತ್ರಿ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ಡಿಕೆಶಿ ಬಣದ ೨೫ಕ್ಕೂ ಹೆಚ್ಚು ಶಾಸಕರು ಪಾರ್ಟಿ ನಡೆಸಿ ಪಾಲಿಟಿಕ್ಸ್ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಭೆಯ ನಂತರ ಮಾತನಾಡಿರುವ ಶಾಸಕರಾದ ಬಾಲಕೃಷ್ಣ, ನಯನ ಮೋಟಮ್ಮ, ರವಿಕುಮಾರ್ಗೌಡ, ಉದಯ್, ಹರಿಶ್ಗೌಡ.ಕೆ ಮೊದಲಾದವರು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ನಮಗೂ ಆಸೆ ಇದೆ. ಆದರೆ, ಯಾವಾಗ, ಹೇಗೆ ಎಂಬ ಬಗ್ಗೆ ಗೊಂದಲ ಮೂಡಿದ್ದು ಇದಕ್ಕೆ ಹೈಕಮಾಂಡ್ ಸ್ಪಷ್ಟ ಉತ್ತರ ನೀಡಬೇಕೆಂದು ಮನವಿ ಮಾಡಿದರು.
ಪಾರ್ಟಿ ಮುಗಿಸಿ ಹೊರ ಬಂದ ಬಾಲಕೃಷ್ಣ ಮಾತನಾಡಿ, ರಾಜ್ಯದಲ್ಲಿ ನಾಯಕತ್ವ ಗೊಂದಲಕ್ಕೆ ತಕ್ಷಣ ತೆರೆ ಎಳೆಯಬೇಕು. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೆ ಕಾಂಗ್ರೆಸ್ ಗೆಲ್ಲೋದು ಕಷ್ಟವಾಗಬಹುದು. ಆದ್ದರಿಂದ ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟ ತೀರ್ಮಾನ ಪ್ರಕಟಿಸಬೇಕೆಂದು ಕೋರಿದರು. ಈ ಸಂಬಂಧ ನಾವು ಹೈಕಮಾಂಡ್ ಭೇಟಿ ಮಾಡಿ ಮನವಿ ಸಲ್ಲಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಮಂಡ್ಯದ ಶಾಸಕ ರವಿಕುಮಾರ್ಗೌಡ ಮಾತನಾಡಿ, ಬಾಲಕೃಷ್ಣ ಅವರ ಹುಟ್ಟುಹಬ್ಬಕ್ಕೆ ಸೇರಿದ್ದು ನಿಜ. ಅಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿರುವುದೂ ನಿಜ. ನಮಗೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಈಗ ಎದ್ದಿರುವ ಗೊಂದಲದಿಂದ ಎಲ್ಲರಿಗೂ ಮುಜುಗರವಾಗುತ್ತಿದೆ. ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮರೆತು ಮಾಧ್ಯಮಗಳು ಬರೀ ನಾಯಕತ್ವದ ಚರ್ಚೆ ಮಾಡುತ್ತಿದೆ. ಇದರಿಂದ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದರು.
ಮೂಡುಗೆರೆ ಶಾಸಕಿ ನಯನ ಮೋಟಮ್ಮ ಮಾತನಾಡಿ, ನಾವು ಒಂದೆಡೆ ಸೇರಿದ್ದೂ ಸತ್ಯ, ರಾಜಕೀಯ ಮಾತನಾಡಿದ್ದೂ ಸತ್ಯ, ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ್ದೇವೆ. ಡಿ.ಕೆ.ಶಿವಕುಮಾರ್ ಅವರು ನನಗೆ ರಾಜಕೀಯ ಗುರು. ನನಗೆ ಟಿಕೆಟ್ ಕೊಡಿಸಿ ಶಾಸಕಿಯನ್ನಾಗಿ ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕೆಂಬುದುದೇ ನನ್ನ ಉದ್ದೇಶ. ಇದಕ್ಕಾಗಿ ಮತ್ತೊಮ್ಮೆ ದೆಹಲಿಗೆ ಹೋಗಲು ಸಿದ್ಧ ಎಂದು ತಿಳಿಸಿದರು.
ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ಗೌಡ ಮಾತನಾಡಿ, ಹುಟ್ಟುಹಬ್ಬಕ್ಕೆ ಸೇರಿದಾಗ ಒಂದಿಷ್ಟು ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯಾಗಿದೆ. ನಮಗೆ ಸಿಎಂ ಸಿದ್ದರಾಮಯ್ಯ ಅವರೂ ಮುಖ್ಯ, ಡಿಕೆ ಶಿವಕುಮಾರ್ ಅವರೂ ಮುಖ್ಯ. ಇಬ್ಬರೂ ನಮ್ಮ ನಾಯಕರೇ. ಇಬ್ಬರೂ ಸೇರಿಯೇ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನುಡಿದರು.
ಪಾರ್ಟಿಯಲ್ಲಿ ಶಾಸಕರಾದ ಸುಧಾಕರ್, ಸಿ.ಪಿ.ಯೋಗೇಶ್ವರ್ ಸೇರಿದಂತೆ ೨೦ಕ್ಕೂ ಹೆಚ್ಚು ಶಾಸಕರು ಹಾಜರಿದ್ದರು.
ಎಲ್ಲ ಗೆಳೆಯರು ಒಂದೆಡೆ ಸೇರಿ ಮಾತುಕತೆ ನಡೆಸಿರಬಹುದು. ನಾಯಕತ್ವ ಬದಲಾವಣೆ ಸಂಬಂಧ ಯಾರೂ ಸಹ ದೆಹಲಿಗೆ ಹೋಗುವುದು ಬೇಡ. ಸಮಯವೇ ಎಲ್ಲದಕ್ಕೂ ಪರಿಹಾರ ನೀಡಲಿದೆ.
-ಡಿ.ಕೆ.ಶಿವಕುಮಾರ್, ಡಿಸಿಎಂ.

