ಬೆಂಗಳೂರು: ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಋತುಚಕ್ರ ನೀತಿ 2025ಕ್ಕೆ ಅನುಮೋದನೆ ದೊರೆತಿದೆ. ಈ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಖಾಸಗಿ, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಸೇರಿ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾಸಿಕ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡುವ ನೀತಿಗೆ ಚಾಲನೆ ನೀಡಲಾಗಿದೆ. ಈ ರೀತಿಯ ಉತ್ತಮ ತೀರ್ಮಾನ ಕೈಗೊಂಡ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಇದರಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಇರುವ ಲಕ್ಷಾಂತರ ಮಹಿಳೆಯರಿಗೆ ಅನುಕೂಲ ಆಗಿದೆ.
ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ನಾಡಿನ ಲಕ್ಷಾಂತರ ಹೆಣ್ಣುಮಕ್ಕಳು, ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟವನ್ನು ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನವನ್ನು ನಮ್ಮ ಸರ್ಕಾರವು ಕೈಗೊಂಡಿದೆ. ಸರ್ಕಾರವು ಮಾನವೀಯ ಕಾಳಜಿಯನ್ನು, ತನ್ನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮಾತೃ ಹೃದಯವನ್ನು ಹೊಂದಿದ್ದಾಗ ಮಾತ್ರ ಇಂಥದ್ದೊಂದು ನಿರ್ಣಯ ಕೈಗೊಳ್ಳಲು ಸಾಧ್ಯ. ಈ ಐತಿಹಾಸಿಕ ನಿರ್ಣಯವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಾವು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.


