Online News in ಕನ್ನಡ

ಬಲೂನು ಮಾರಲು ಬಂದಿದ್ದ ಬಾಲಕಿ ಹತ್ಯೆ; ಆರೋಪಿ ಅಂದರ್‌

ಮೈಸೂರು: ಇಲ್ಲಿನ ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ಬಾಲಕಿ ಹತ್ಯೆ ಕೇಸ್‌ ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 8 ಗಂಟೆಗಳ ಒಳಗೆ ಆರೋಪಿ ಕಾರ್ತಿಕ್‌ ಎಂಬಾತನನ್ನು ಕೊಳ್ಳೇಗಾಲದಲ್ಲಿ ಬಂಧಿಸಲಾಗಿದೆ.

ಘಟನೆ ಹಿನ್ನೆಲೆ: ಮೈಸೂರು ದಸರಾ ಹಿನ್ನೆಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಸ್ಥರು ಗುಲ್ಬರ್ಗದಿಂದ ಮೈಸೂರಿಗೆ ಬಂದಿದ್ದರು. ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗ ಮೈಸೂರಿನ ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಂಗಿದ್ದರು.  ಈ ಮಧ್ಯೆ ನಗರದ ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿ ಹಲವು ಸ್ಥಳಗಳಲ್ಲಿ ಇವರು ವ್ಯಾಪಾರ ಮಾಡುತ್ತಿದ್ದರು. ಗುರುವಾರ ರಾತ್ರಿ ಸುಮಾರು 12 ಗಂಟೆವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಒಂದೇ ಕುಟುಂಬದ 8 ಜನ ಒಟ್ಟಿಗೆ ಮಲಗಿದ್ದರು‌. ಮುಂಜಾನೆ 4 ಗಂಟೆಯಲ್ಲಿ ಮಳೆ ಬಂದಾಗ ಎಚ್ಚರವಾಗಿದ್ದು, ಆಗ ಪಕ್ಕದಲ್ಲಿ ಮಗು ಇಲ್ಲದ್ದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅರೆ ನಗ್ನ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ತಕ್ಷಣ ಕುಟುಂಬಸ್ಥರು ನಜರ್‌ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಘಟನೆ ನಡೆದ ಪ್ರದೇಶದ ಸುತ್ತಲೂ ಇರುವ ಸಿಸಿ ಕ್ಯಾಮರಾಗಳನ್ನು ಚೆಕ್‌ ಮಾಡಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ಬಂದು ಮಗುವನ್ನು ಎತ್ತುಕೊಂಡು ಹೋಗುವ ದೃಶ್ಯ ಸಿಕ್ಕಿದೆ. ಇದನ್ನು ಆಧರಿಸಿ ಪೊಲೀಸರು ಆತನ ಫೋಟೋವನ್ನು ಎಲ್ಲಾ ಠಾಣೆಗಳಿಗೂ ಕಳುಹಿಸಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಯಾರು ಈ ಕಾರ್ತಿಕ್..?‌

ಆರೋಪಿ ಕಾರ್ತಿಕ್‌ ಈ ಹಿಂದೆ ಮಹಿಳೆಯ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಹೈಕೋರ್ಟ್‌ ನಿಂದ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದ. ಈಗ ದಸರಾ ಅಂಗವಾಗಿ ಬಲೂನ್‌ ಮಾರಲು ಬಂದಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾನೆ.

Call Now Button