ಮೈಸೂರು: ಸಂತ ಫಿಲೋಮಿನಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾ ಸ್ಪರ್ಧೆಗಳ ಬಾಲಕರ ವಾಲಿಬಾಲ್ ವಿಭಾಗದಲ್ಲಿ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜು ಮತ್ತು ಬಾಲಕಿಯರ ಥ್ರೋ ಬಾಲ್ ವಿಭಾಗದಲ್ಲಿ ಸರಸ್ವತಿಪುರಂನ ಜೆಎಸ್ ಎಸ್ ಮಹಿಳಾ ಕಾಲೇಜು ತಂಡಗಳು ಪ್ರಥಮ ಪ್ರಶಸ್ತಿ ಪಡೆದುಕೊಂಡಿವೆ.
ವಾಲಿಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿಗಳು 21-17, 16-21, 15-12 ಅಂಕಗಳಿಂದ ದಕ್ಷ ಪಿಯು ಕಾಲೇಜು ತಂಡವನ್ನು ಸೋಲಿಸಿತು. ಆ ಮೂಲಕ ದಕ್ಷ ಕಾಲೇಜು ದ್ವಿತೀಯ ಸ್ಥಾನ ಪಡೆದರೆ ಲಕ್ಷ್ಮೀ ಹಯಗ್ರೀವ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು.
ಬಾಲಕಿಯರ ಥ್ರೋಬಾಲ್ ಫೈನಲ್ ಪಂದ್ಯದಲ್ಲಿ ಜೆಎಸ್‌ಎಸ್ ಕಾಲೇಜು ತಂಡವು 21-14 ಅಂಕಗಳ ಅಂತರದಲ್ಲಿ ಮರಿಮಲ್ಲಪ್ಪ ಕಾಲೇಜಿನ ಬಾಲಕಿಯರ ತಂಡವನ್ನು ಮಣಿಸಿತು. ಇದರೊಂದಿಗೆ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಎರಡನೇ ಸ್ಥಾನ ಪಡೆಯಿತು. ಟೆರೇಷಿಯನ್ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಮೂರನೇ ಸ್ಥಾನ ಗಳಿಸಿತು.
ವಿಜೇತ ಕ್ರೀಡಾಪಟುಗಳಿಗೆ ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಫಾ.ಲೂರ್ದ್ ಪ್ರಸಾದ್ ಜೋಸೆಫ್ ಅವರು ಬಹುಮಾನ ವಿತರಿಸಿದರು. ಈ ವೇಳೆ ಪಿಯು ವಿಭಾಗದ ಪ್ರಾಂಶುಪಾಲ ಸುನೀಲ್ ಡಿಸೋಜಾ, ಪದವಿ ವಿಭಾಗದ ರವಿ ಸಲ್ಡಾನ್ಹ, ದೈಹಿಕ ಶಿಕ್ಷಣ ನಿರ್ದೇಶಕ ಮುರಳೀಧರ್ ಹಾಜರಿದ್ದರು. ಇನ್ನು ಜಯ ಗಳಿಸಿದ ತಂಡ ಮತ್ತು ವಿದ್ಯಾರ್ಥಿಗಳಿಗೆ ಆಯಾ ಶಾಲೆಯ ಆಡಳಿತ ಮಂಡಳಿಗಳು ಅಭಿನಂದನೆ ತಿಳಿಸಿವೆ.


