ನವ ದೆಹಲಿ, ಆಗಸ್ಟ್ 14- ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಲೆಯ ಆರೋಪ ಎದುರಿಸುತ್ತಿದ್ದ ನಟ ದರ್ಶನ್ ಮತ್ತು ಸಹಚರರಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೆ, ಜೈಲುಗಳಲ್ಲಿ ಖೈದಿಗಳಿಗೆ ರಾಜ ಆತಿಥ್ಯ ನೀಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯ ಕಾನೂನು ಎಲ್ಲರಿಗೂ ಒಂದೇ ಎಂದು ಘೋಷಿಸಿದೆ. ಹಾಗೂ ಕರ್ನಾಟಕ ಹೈಕೋರ್ಟ್‍ಗೆ ಛೀಮಾರಿ ಹಾಕಿದೆ.
ಜುಲೈ 24ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಆರ್. ಮಹದೇವನ್ ಅವರಿದ್ದ ಪೀಠವು, `ನಾವು ಎಲ್ಲ ವಿಚಾರಗಳನ್ನೂ ಪರಿಗಣಿಸಿದ್ದೇವೆ, ಹೈಕೋರ್ಟ್ ಆದೇಶವು ಗಂಭೀರ ದೌರ್ಬಲ್ಯಗಳಿಂದ ಕೂಡಿರುವುದು ಸ್ಪಷ್ಟವಾಗಿದೆ’ ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖರ ಆರೋಪಗಳು ಮತ್ತು ವಿಧಿವಿಜ್ಞಾನದ ಪ್ರಯೋಗಾಲಯದ ಹಲವು ಸಾಕ್ಷ್ಯಗಳು ಜಾಮೀನು ರದ್ದುಗೊಂಡಿರುವುದೇ ಎಂಬುದನ್ನು ಸಮರ್ಥಿಸುತ್ತವೆ. ಈ ಪ್ರಕರಣದ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯವೇ ಸೂಕ್ತ. ಆರೋಪಿಗಳಿಗೆ ನೀಡಿರುವ ಜಾಮೀನನ್ನು ರದ್ದು ಮಾಡಲಾಗಿದೆ ಎಂದು ಪೀಠ ಹೇಳಿದೆ.


