ಹುಣಸೂರು: ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೆ ಜನರ ನಡುವೆ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಬೆಸೆಯುವ ತಾಣಗಳಾಗಬೇಕೆಂದು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾಸ್ತಮ್ಮ ದೇವಿಯ ದೇವಾಲಯದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒತ್ತಡ ಜೀವನದಲ್ಲಿ ಸಿಲುಕಿರುವ ಜನರಿಗೆ ದೇವಸ್ಥಾನಗಳು ನೆಮ್ಮದಿ ಕೇಂದ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ವಿಶಿಷ್ಟ ಸ್ಥಾನವಿದೆ. ಆದರೆ, ಅವುಗಳು ಕೇವಲ ಪೂಜಾ ಸ್ಥಳಕ್ಕೆ ಸೀಮಿತವಾಗದೆ, ಸಮಾಜಕ್ಕೆ ಸೌಹಾರ್ದತೆ ಮತ್ತು ಸಂಸ್ಕಾರ ಕಲಿಸುವ ಕೇಂದ್ರವಾಗಬೇಕು. ಧರ್ಮಾಚರಣೆಯಿಂದ ಮನುಷ್ಯನು ಸಂಸ್ಕಾರವಂತ್ತನಾಗುತ್ತಾನೆ. ಆದರೆ, ಇದೆಲ್ಲದಕ್ಕಿಂತ ಮಿಗಿಲಾಗಿ ಜನ್ಮ ನೀಡಿದ ತಂದೆ ತಾಯಿಯಲ್ಲಿ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ಕಷ್ಟದಲ್ಲಾದವರನ್ನು ಸ್ಮರಿಸುವ ಗುಣ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಆಗಮಿಸಿದ ಎಲ್ಲಾ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಗೀತಾ ಸುರೇಶ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಸುಂದರ್ ಹಾಗೂ ಪ್ರೇಮ್ ಕುಮಾರ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕಲ್ಕುಣಿಕೆ ರಾಘು, ಉದ್ಯಮಿಗಳಾದ ರಾಜು ಶಿವರಾಜೇಗೌಡ, ಟಿ.ಕೃಷ್ಣ, ಡಾ.ಎಚ್.ವಿ.ಕಾರ್ತಿಕ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಎಚ್.ಎಸ್.ಕುಮಾರ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಹೆಮ್ಮಿಗೆ ರಾಮೇಗೌಡ, ಹನಗೋಡು ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಕಚ್ಚುವಿನಹಳ್ಳಿ ಲೋಕೇಶ್, ದೇವಾಲಯ ಸೇವಾ ಸಮಿತಿ ಸದಸ್ಯರಾದ ಕುಮಾರ್, ಬಸವರಾಜ್ ಸೇರಿದಂತೆ ಗ್ರಾಮದ ಯಜಮಾನರು ರಾಜೇಗೌಡ, ಮುದ್ದೇಗೌಡ, ನಾಗೇಗೌಡ, ನಾಗರಾಜಶೆಟ್ಟಿ, ಮಾದನಾಯಕ, ಶಿವಣ್ಣನಾಯಕ, ವೀರಭದ್ರಶೆಟ್ಟಿ, ನಟೇಶ್, ಮಹದೇವಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ಶ್ರೀ ಮಾಸ್ತಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ, ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ದೇವಾಲಯ ಸೇವಾ ಸಮಿತಿಯ ಕುಮಾರ್, ಬಸವರಾಜ್, ಛಾಯಾ ಸೇರಿದಂತೆ ಇತರರು ಇದ್ದಾರೆ.

