Online News in ಕನ್ನಡ

ಮ್ಯಾಜಿಕ್‌ ನಂಬರ್‌ 120 ತಲುಪಿದ ಟಿವಿಕೆ ವಿಜಯ್‌ : ಅಳೆದು ಸುರಿದು ವಿಸಿಕೆ ಬೆಂಬಲ

ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಟಿವಿಕೆ ಹೊರ ಹೊಮ್ಮಿದರೂ ಸರಕಾರ ರಚನೆಗೆ ಬೇಕಾದ 118 ಶಾಸಕ ಸ್ಥಾನವನ್ನು ಒಗ್ಗೂಡಿಸುವಲ್ಲಿ ಸತತ ಐದು ದಿನಗಳಿಂದ ಅವಿರತ ಪ್ರಯತ್ನದ ಬಳಿಕ ನಟ ಜೋಸೆಫ್‌ ವಿಜಯ್‌ ಮ್ಯಾಜಿಕ್‌ ನಂಬರ್‌ ಮುಟ್ಟಿದ್ದಾರೆ. ವಿಸಿಕೆ ಬೆಂಬಲದ ಬೆನ್ನ ಹಿಂದೆಯೇ ಐಯುಎಂಎಲ್‌ ಸಹ ತನ್ನ ಇಬ್ಬರು ಶಾಸಕರ  ಬೆಂಬಲವನ್ನು ಘೋಷಿಸಿದ್ದು, ವಿಜಯ್‌ಗೆ 120 ಶಾಸಕರ ಬೆಂಬಲ ವ್ಯಕ್ತವಾಗಿದೆ.
ಅಳೆದು-ಸುರಿದು ವಿಸಿಕೆ ಪಕ್ಷ ಟಿವಿಕೆಗೆ ಬೆಂಬಲ ನೀಡಲು ಸಮ್ಮತಿ ಸೂಚಿಸಿದ್ದು ಬೆಂಬಲ ಪತ್ರವನ್ನು ರವಾನಿಸಿದೆ. ಈಗಾಗಲೇ ಕಾಂಗ್ರೆಸ್‌, ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಬೆಂಬಲ ಘೋಷಿಸಿದ್ದವು. ಇದರೊಂದಿಗೆ ಟಿವಿಕೆ 107, ಕಾಂಗ್ರೆಸ್‌ 5, ಸಿಪಿಐ 2, ಸಿಪಿಐ(ಎಂ) 2 ಹಾಗೂ ವಿಸಿಕೆ 2 ಸ್ಥಾನಗಳೊಂದಿಗೆ ನಟ ವಿಜಯ್‌ ಸರಕಾರ ರಚನೆಗೆ ಬೇಕಾದ 118 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಟಿವಿಕೆ ನಾಯಕ ಆದವ್‌ ಅರ್ಜುನಾ, ಗೆಲುವಿನ ಚಿನ್ಹೆ ತೋರುತ್ತಾ ಗೆಲುವು ಎಂದು ಹೇಳಿ, ಸರಕಾರ ರಚನೆಗೆ ಟಿವಿಕೆಗೆ ಬೆಂಬಲ ನೀಡಿರುವ ವಿಸಿಕೆಯ ಪತ್ರವನ್ನು ಪ್ರದರ್ಶಿಸಿದ್ದಾರೆ.
ಆಮೂಲಕ ನಟ ರಾಜಕಾರಣಿಯಾಗಿ ಹೊರ ಹೊಮ್ಮಿರುವ ವಿಜಯ್‌ ಅವರು ಸರಕಾರ ರಚಿಸುವ ಹಾದಿ ಸುಗಮಗೊಂಡಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಹಾಗೂ ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೇಷರತ್ತು ಬೆಂಬಲ:
ಸರ್ಕಾರ ರಚನೆ ವಿಳಂಬದ ನಡುವೆ ವಿಸಿಕೆ ಜೊತೆ ಟಿವಿಕೆ ಕಠಿಣ ಮಾತುಕತೆ ನಡೆಸುತ್ತಿದೆ ಎಂಬ ವರದಿಗಳು ಕೇಳಿಬಂದಿವೆ. ಬೆಂಬಲದ ಬದಲಿಗೆ ವಿಸಿಕೆ ದೊಡ್ಡ ಮಟ್ಟದ ಅಧಿಕಾರ ಹಂಚಿಕೆ ಬೇಡಿಕೆ ಮುಂದಿಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ವಿಸಿಕೆ ತನ್ನ ಬೆಂಬಲ ಪತ್ರ ನೀಡುವಾಗ ಟಿವಿಕೆಗೆ ಬೇಷರತ್‌ ಬೆಂಬಲ ನೀಡುತ್ತಿರುವುದಾಗಿ ಆ ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.

Call Now Button