ಮೈಸೂರು: ಶೃಂಗೇರಿ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನಲ್ಲೆಯಲ್ಲಿ ರಾಜೇಗೌಡರು ಪ್ರಮಾಣ ವಚನ ಸ್ವೀಕರಿಸಲು ಸಮಯ ನೀಡುವ ಕುರಿತು ಇಂದು ರಾತ್ರಿ ತೀರ್ಮಾನಿಸಲಾಗುವುದು ಎಂದು ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ತಿಳಿಸಿದರು.
ಮೈಸೂರಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇವೆ ಎಂದರು.
ಈಗ ನಾನು ಸ್ಪೀಕರ್. ನನ್ನದು ಸಂವಿಧಾನದ ಚಾನಲ್ ಮಾತ್ರ ಓಪನ್ ಆಗಿದೆ. ರಾಜಕೀಯ ಚಾಲನ್ ಮುಚ್ಚಿದೆ. ಹಾಗಾಗಿ ರಾಜಕಾರಣದ ಬಗ್ಗೆ ಮಾತನಾಡಲ್ಲ. ರಾಜಕೀಯದ ಚಾನಲ್ ಓಪನ್ ಆದಾಗ ರಾಜಕೀಯದ ಬಗ್ಗೆ ಮಾತನಾಡುತ್ತೇನೆ. ಆದರೆ, ಯಾವಾಗ ಸಂವಿಧಾನದ ಚಾನಲ್ ಬಂದ್ ಆಗುತ್ತೆ ? ಯಾವಾಗ ರಾಜಕೀಯ ಚಾನಲ್ ಓಪನ್ ಆಗುತ್ತೆ ಅದೂ ಗೊತ್ತಿಲ್ಲ
– ಯು.ಟಿ. ಖಾದರ್, ಸ್ಪೀಕರ್
ಶೃಂಗೇರಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅಕ್ರಮ ಮತ್ತು ನ್ಯಾಯಾಂಗ ಸಮರದ ನಂತರ ಸುಪ್ರೀಂಕೋರ್ಟ್ ನೀಡಿರುವ ಆದೇಶದನ್ವಯ ರಾಜೇಗೌಡರು ಪ್ರಮಾಣ ವಚನ ಸ್ವೀಕರಿಸಲು ಸಮಯ ಕೇಳಿದ್ದಾರೆ. ಸಮಯ ಯಾವಾಗ ಕೊಡಬೇಕೆಂದು ಇಂದು ರಾತ್ರಿ ತೀರ್ಮಾನ ಮಾಡುತ್ತೇನೆ. ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪಿನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪೆಟ್ರೋಲ್ ಮತ್ತು ಚಿನ್ನ ಖರೀದಿಯ ಬಗ್ಗೆ ಮೋದಿ ಸಂದೇಶ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಲಿದೆ. ನಾನು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲವೆಂದರು.
ಲೋಕಸಭಾ ಸ್ಪೀಕರ್ ಅವರು ಆರು ರಾಜ್ಯಗಳ ವಿಧಾನಸಭಾ ಸ್ಪೀಕರ್‌ಗಳ ಸಮಿತಿಯನ್ನು ರಚಿಸಿದ್ದಾರೆ. ಆ ಸಮಿತಿಯ ಸಭೆ ಇಂದು ಮೈಸೂರಿನಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಮುಂಬೈ, ಹಿಮಾಚಲ ಪ್ರದೇಶ, ನಾಗಲಾಂಡ್, ದೆಹಲಿಯ ಸ್ಪೀಕರಗಳು ಸದಸ್ಯರಾಗಿದ್ದಾರೆ. ಕಲಾಪಗಳನ್ನು ಇನ್ನಷ್ಟು ಉತ್ತಮಗೊಳಿಸಲು ಕೈಗೊಳ್ಳಬಹುದಾಗ ಸುಧಾರಣೆಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.


