Online News in ಕನ್ನಡ

ಶತಮಾನದ ವರ್ಷಕ್ಕೆ ಕಾಲಿಟ್ಟ ಮಹಾದ್‌ ಸತ್ಯಾಗ್ರಹದ ಪ್ರಮುಖ ಮೂರು ಆಯಾಮ ಏನು ?

ಕಾಲಮಾಲ-೧೩

ಕೆ.ದೀಪಕ್

ಮಾರ್ಚ್‌ ೨೦ರ ನಂತರ ದಲಿತರಿಗೆ ವಿಶೇಷ ವರ್ಷ ಆರಂಭಗೊಂಡಿದೆ.

ಭಾರತದಲ್ಲಿ ದೇಶ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಅವರು ವಿದೇಶಿಯರ ವಿರುದ್ಧ ನಡೆಸಿದ ಉಪ್ಪಿನ ಸತ್ಯಾಗ್ರಹಕ್ಕೂ ಮೊದಲು ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಮಾನವ ಸ್ವಾತಂತ್ರ್ಯಕ್ಕಾಗಿ ದೇಶಿಯರ ವಿರುದ್ಧವೇ ನೀರಿನ ಸತ್ಯಾಗ್ರಹ ನಡೆಸಿದ್ದರು. ಇದು ಇತಿಹಾಸದ ಪುಟಗಳಲ್ಲಿ ಮಹಾದ್‌ ಸತ್ಯಾಗ್ರಹ ಎಂದು ದಾಖಲಾಗಿದೆ. ಇದೀಗ ಈ ಐತಿಹಾಸಿಕ ಸತ್ಯಾಗ್ರಹ ಮಾರ್ಚ್‌ 20ಕ್ಕೆ 99 ವರ್ಷಗಳನ್ನು ಪೂರೈಸಿ ಶತಮಾನ ವರ್ಷವನ್ನು ಪ್ರವೇಶಿಸಿದೆ. ಇದು ಕೇವಲ ನೀರಿಗಾಗಿ ನಡೆದ ಸತ್ಯಾಗ್ರಹವಲ್ಲ. ಬದಲಿಗೆ ಹಲವು ಆಯಾಮಗಳಲ್ಲಿ ಮಹಾದ್‌ ಸತ್ಯಾಗ್ರಹ ದಲಿತರ ಪಾಲಿಗೆ ಮಹತ್ವ ಪಡೆದುಕೊಂಡಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಜಾತಿ ವ್ಯವಸ್ಥೆಯಿಂದಾಗಿ ಅಸ್ಪೃಶ್ಯರು ಇತರೆ ಹಿಂದೂ ಜಾತಿಗಳು ಬಳಸುವ ಜಲಮೂಲ ಮತ್ತು ರಸ್ತೆಗಳನ್ನು ಬಳಸುವಂತ್ತಿರಲಿಲ್ಲ. ಆದರೆ, 1923ರಲ್ಲಿ ಬಾಂಬೆ ಶಾಸಕಾಂಗ ಮಂಡಳಿಯು ಇತರೆ ಹಿಂದೂ ಜಾತಿಗಳು ಬಳಸುವ ಜಲಮೂಲ ಮತ್ತು ರಸ್ತೆಗಳನ್ನು ಬಳಸಲು ಅನುಮತಿ ನೀಡಿತ್ತು. ಈ ಆಧಾರದ ಮೇಲೆ 1924ರಲ್ಲಿ ಬಾಂಬೆ ಪ್ರಾಂತ್ಯದ ಭಾಗವಾಗಿದ್ದ ಮಹಾದ್‌ ನಗರದ ಪುರಸಭೆಯ ಮಂಡಳಿಯಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲು ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ, ಮೇಲ್ವರ್ಗದ ಹಿಂದೂಗಳ ಪ್ರತಿಭಟನೆಯಿಂದಾಗಿ ಕಾಯ್ದೆ ಜಾರಿಗೊಸಲು ಸಾಧ್ಯವಾಗಲಿಲ್ಲ.

ಇದಕ್ಕೆ ಪ್ರತಿರೋಧವಾಗಿ 1927, ಮಾರ್ಚ್‌ 20ರಂದು ಬಾಬಾ ಸಾಹೇಬ್‌ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಸಹಸ್ರಾರು ಅಸ್ಪೃಶ್ಯರು ಮಹಾಡ್‌ ನಗರದಲ್ಲಿರುವ ಚೌದರ್‌ ಕೆರೆಗೆ ತೆರಳಿದರು. ಡಾ. ಅಂಬೇಡ್ಕರ್‌ ಚೌದರ್‌ ಕೆರಯ ನೀರನ್ನು ಕುಡಿಯುತ್ತಿದ್ದಂತೆಯೆ, ನೂರಾರು ಜನರು ಅವರನ್ನು ಅನುಸರಿಸಿದರು. ಭಾರತದ ಇತಿಹಾಸದಲ್ಲಿ ಮಾನವನು ತನ್ನ ನೈಸರ್ಗಿಕ ಹಕ್ಕಿಗಾಗಿ ನಡೆದ ಮೊದಲ ಸತ್ಯಾಗ್ರಹ ಇದಾಗಿದೆ.

ನಾವು ಇದುವರೆಗೆ ಮಹಾಡ್‌ ಸತ್ಯಾಗ್ರಹವನ್ನು ಇಷ್ಟಕ್ಕೆ ಹೇಳಿ ನಿಲ್ಲಿಸಿಬಿಡುತ್ತಿದ್ದೇವೆ. ಆದರೆ, ಈ ಸತ್ಯಾಗ್ರಹದ ಎರಡನೇ ಮಹತ್ವದ ಸಂಗತಿಗೆ ಸಾಕ್ಷಿಯಾಗಿದೆ.  ಅದು ಅಸ್ಪೃಶ್ಯ ಹೆಣ್ಣು ಮಕ್ಕಳು ಮೇಲ್ವರ್ಗದ ಮಹಿಳೆಯರಂತೆಯೇ ಪೂರ್ಣ ವಸ್ತ್ರ ಧರಿಸಿದ ದಿನವೂ ಇದಾಗಿದೆ. ಅಂದು ದಲಿತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್‌, ʻಅಸ್ಪೃಶ್ಯತೆಯನ್ನು ಗುರುತಿಸಬಹುದಾದ ಗುರುತುಗಳನ್ನು ಒದಗಿಸುವ ಎಲ್ಲ ಹಳೆಯ ಪದ್ಧತಿಗಳನ್ನು ತ್ಯಜಿಸಿ ಉನ್ನತ ಜಾತಿಯ ಮಹಿಳೆಯರಂತೆ ಸೀರೆಗಳನ್ನು ಧರಿಸುವಂತೆ ಕರೆ ನೀಡಿದರು.


ಈ ಕಾಲಮಾನದಲ್ಲಿ ದಲಿತ ಮಹಿಳೆಯರು ಮೇಲ್ವರ್ಗದ ಮಹಿಳೆಯರಂತೆ ಪೂರ್ಣ ಸೀರೆಯನ್ನು ಧರಿಸುವಂತ್ತಿರಲಿಲ್ಲ. ಮಹಾದ್‌ ಸತ್ಯಾಗ್ರಹದಲ್ಲಿ ಅಂಬೇಡ್ಕರ್‌ ಭಾಷಣ ಮಾಡಿ ಮುಗಿಸುತ್ತಿದ್ದಂತೆಯೇ ಎಲ್ಲ ದಲಿತ ಹೆಣ್ಣು ಮಕ್ಕಳು ಹಳೇ ಪದ್ಧತಿಯನ್ನು ತ್ಯಜಿಸಿ ಮೇಲ್ವರ್ಗದ ಮಹಿಳೆಯರಂತೆ ಸೀರೆ ಉಡಲು ನಿರ್ಧರಿಸಿದರು. ಇದು ಮಹಿಳೆಯ ಆತ್ಮಗೌರವಕ್ಕಾಗಿ ನಡೆದ ಹೋರಾಟದ ಮೊದಲ ಹೆಜ್ಜೆ ಗುರುತಾಗಿದೆ.

ಇನ್ನು ಮಹಾಡ್‌ ಸತ್ಯಾಗ್ರಹ  ಮೂರನೇ ಮಹತ್ವದ ಸಂಗತಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ದಲಿತರ ಪರವಾಗಿ ಹೈಕೋರ್ಟ್‌ ನೀಡಿದ ತೀರ್ಪು. ಮಹಾಡ್‌ ಸತ್ಯಾಗ್ರಹದ ಬಳಿಕವೂ ಮೇಲ್ವರ್ಗಗಳು ಚೌದರ್‌ ಕೆರೆಯಿಂದ ಅಸ್ಪೃಶ್ಯರು ನೀರು ಬಳಸಲು ಬಿಡಲಿಲ್ಲ. ಇದೊಂದು ಖಾಸಗಿ ಕೆರೆ ಎಂದು ಹೇಳಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಾರೆ. 1937 ಡಿಸೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್‌ ಅಸ್ಪೃಶ್ಯರಿಗೆ ಚೌದರ್‌ ಕೆರೆಯಲ್ಲಿ ನೀರನ್ನು ಬಳಸುವ ಹಕ್ಕಿದೆ ಎಂದು ತೀರ್ಪು ನೀಡುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಪೃಶ್ಯತ ಹಕ್ಕುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಹೊರಬಂದ ಮೊದಲ ಆದೇಶ ಇದಾಗಿದೆ.

ಒಟ್ಟಾರೆ, ಡಾ.ಬಿ.ಆರ್.‌ ಅಂಬೇಡ್ಕರ್‌ ನೇತೃತ್ವದಲ್ಲಿ ನಡೆದ ಮಹಾದ್‌ ಚಳವಳಿಯ ಕೇವಲ ಕುಡಿಯುವ ನೀರಿನ ಸತ್ಯಾಗ್ರಹವಾಗಿರದೆ ದಲಿತ ಮಹಿಳೆಯರ ಸ್ವಾಭಿಮಾನ ಮತ್ತು ಆತ್ಮಗೌರವದ ಸಂಕೇತವೂ ಇದಾಗಿದೆ. ಆಕಾರಣದಿಂದಲೇ ಭಾರತದಲ್ಲಿ ಮಾರ್ಚ್‌ 20ನ್ನು ಸಾಮಾಜಿಕ ಸ್ವಾವಲಂಬನೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೀಗ ನೂರು ವರ್ಷಕ್ಕೆ ಕಾಲಿರಿಸಿರುವ ʻಮಹಾದ್‌ ಚಳವಳಿʼ ಯ ಶತಮಾನೋತ್ಸವವನ್ನು ದೇಶ ವ್ಯಾಪಿ ಆಚರಿಸಬೇಕೆ.

ಸರಕಾರ, ಸಮುದಾಯ, ಸಮಾಜ ಇತ್ತ ಗಮನಹರಿಸಲಿ…

 

 

Call Now Button