Online News in ಕನ್ನಡ

ಒಳಮೀಸಲಾತಿ ಹೋರಾಟ ತಾರ್ಕಿಕ ಅಂತ್ಯಕ್ಕೆ; ಕಗ್ಗಂಟು ಬಿಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಯಾವುದೇ ವಿವಾದ, ಗೊಂದಲ ಇಲ್ಲದೇ ಒಳಮೀಸಲಾತಿ ಹಂಚಿಕೆಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಮಾಡಿದೆ. ನ್ಯಾ.ನಾಗಮೋಹನ್‌ ದಾಸ್‌ ಆಯೋಗ ನೀಡಿದ್ದ ವರದಿಯಲ್ಲಿ ಮಾಡಿದ್ದ 5 ಗುಂಪುಗಳಿಗೆ ಬದಲಾಗಿ ಎಡಗೈ, ಬಲಗೈ ಮತ್ತು ಇತರೆ ಎನ್ನುವ ಮೂರು ಗುಂಪುಗಳನ್ನಾಗಿ ಮಾಡಿ ಒಳಮೀಸಲಾತಿ ಹಂಚಿಕೆ ಮಾಡಿದ್ದು, ದಶಕಗಳ ಕಾಲದ ಬೇಡಿಕೆ ಮತ್ತು ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ಪರಿಶಿಷ್ಟ ಜಾತಿಗೆ ಇರುವ ಶೇ. 17ರಷ್ಟು ಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ ಶೇ.6 ರಷ್ಟು ಮತ್ತು ಇತರ (ಸ್ಪೃಶ್ಯ ಜಾತಿ) ಸಮುದಾಯಗಳಿಗೆ ಶೇ.5 ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದು ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಈ ಸಂಬಂಧ ಆ. 20ರಂದು ಸಿದ್ದರಾಮಯ್ಯ ಅವರು ಸದನದಲ್ಲಿ ವಿಚಾರ ಮಂಡನೆ ಮಾಡಲಿದ್ದು, ಇನ್ನು ಎರಡು ದಿನಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ.

ನಾಗಮೋಹನ್ ದಾಸ್ ಸಮಿತಿ ವರದಿಯು ಎಡಗೈ ಸಮುದಾಯಕ್ಕೆ 6% ಮತ್ತು ಬಲಗೈ ಸಮುದಾಯಕ್ಕೆ 5% ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು. ಇದಕ್ಕೆ ಬಲಗೈ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ರಾಜ್ಯ ಸರ್ಕಾರ 18 ಜಾತಿಗಳನ್ನು ಒಳಗೊಂಡಿರುವ ಎಡಗೈ ಸಮುದಾಯ ಮತ್ತು 20 ಜಾತಿಗಳನ್ನು ಒಳಗೊಂಡಿರುವ ಬಲಗೈ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ ಹಂಚಿಕೆ ಮಾಡಿ ಸಮಾನ ಪ್ರಾತಿನಿಧ್ಯ ನೀಡಿದೆ. ಉಳಿದಂತೆ, 63 ಸ್ಪೃಶ್ಯ ಜಾತಿಗಳಿಗೆ (ಬೋವಿ, ಲಂಬಾಣಿ ಕೊರಮ ಕೊರಚ) 5% ಮೀಸಲಾತಿ ಕಲ್ಪಿಸಿದೆ.

ದಲಿತ ಎಡಗೈ ಜಾತಿಗಳ ಪಟ್ಟಿ

ಭಾಂಬಿ, ಅಸದರು, ಅಸೋಡಿ, ಚಮಡಿಯಾ, ಚಮರ್, ಚಂಬರ, ಚಮಗಾರ, ಹರಳಯ್ಯ, ಹರಳಿ, ಖಾಲ್ಪ, ಮಚಿಗಾರ, ಮೋಚಿಗಾರ, ಮಾದರ, ಮಾದಿಗ, ಮೋಚಿ, ಮುಚ್ಚಿ, ತೆಲುಗು ಮೋಚಿ, ಕಾಮತಿ ಮೋಚಿ, ರಾಣಿಗಾರ್, ರೋಹಿದಾಸ್, ರೋಹಿತ್, ಸಮ್ಗರ್, ಹಕ್ಕಳಯ್ಯ, ಧೋರ್ಕ, ಹಕ್ಕಳಯ್ಯ, ಧೋರ್ಕಾ ಹಲಸ್ವರ, ಹಸ್ಲ, ಕಡಯ್ಯನ್, ಕೆಪ್ಮರಿಸ್, ಕೊಲುಪುಲ್ವಂಡಿಯು, ಕುಟುಂಬನ್, ಮಾದಿಗ, ಮಾವಿಲನ್, ಮೊಗೇರ್, ಪಂಚಮ, ಪನ್ನಿಯಾಂಡಿ, ಪರಯ್ಯನ್, ಪರಯ, ಸಮಗಾರ, ಸಾಂಬನ್

ದಲಿತ ಬಲಗೈ ಜಾತಿಗಳ ಪಟ್ಟಿ

ಅಣಮುಕ್, ಅರೆ ಮಾಳ, ಅರವ ಮಾಳ, ಬಲಗೈ, ಛಲವಾದಿ, ಚಲವಾದಿ, ಚನ್ನಯ್ಯ, ಪಲ್ಲನ್, ಹೊಲಯ, ಹೊಲೆಯ, ಹೊಲೆಯ, ಮಹ್ಯವಂಶಿ, ಧೇಡ್, ವಂಕರ್, ಮಾರು ವಂಕರ್, ಮಾಳ, ಮಲ ಹಣ್ಣಾಯಿ, ಮಾಳ ಜಂಗಮ, ಮಾಳ ಮಾಸ್ತಿ, ಮಲ ಮಾರಾಟ, ನೆಟ್ಕಣಿ, ಮಹಾರ್, ತರಲ್, ಧೇಳು, ದೇಗುಲ ಮೇಗುಂದ,ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ.

5% ಮೀಸಲಾತಿ ಪಡೆದ ಜಾತಿಗಳು

ಬಕುಡ, ಬಂಜಾರ, ಲಂಬಾಣಿ, ಲಂಬಾಡ, ಲಂಬಾಡಿ, ಲಮಾಣಿ, ಸುಗಾಲಿ, ಸುಕಾಲಿ; ಭೋವಿ, ಓಡ್, ಒಡ್ಡೆ, ವಡ್ಡರ, ವಡ್ಡರ, ವಡ್ಡರ, ವಡ್ಡರ, ಕಲ್ಲುವಡ್ಡರ, ಬೋವಿ (ಬೆಸ್ತರಲ್ಲದ), ಮಣ್ಣುವಡ್ಡರ; ಎಲ್ಲಮಾಳ್ವಾರ್, ಯೆಲ್ಲಮ್ಮಲವಾಂಡ್ಲು; ಕೊರಚ, ಕೊರಚಾರ್; ಕೊರಮ, ಕೊರವ, ಕೊರವರ; ಲಿಂಗಾಡರ್; ಮುಕ್ರಿ; ಮುಂಡಾಲ; ಪಂಬದ; ಸಪಾರಿ; ತಿರ್ಗರ್, ತಿರ್ಬಂದ.

Call Now Button