ಮೈಸೂರು: ದಸರಾ ಮುಗಿಯುತ್ತಿದ್ದಂತೆ ನಗರದಲ್ಲಿ ರೌಡಿಗಳ ಗುಂಪು ಅಟ್ಟಹಾಸ ಮರೆದಿದ್ದು ಹಾಡುಹಗಲೇ ರೌಡಿಶೀಟರ್ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ದಸರಾ ವಸ್ತುಪ್ರದರ್ಶನದ ಬಳಿ ನಡೆದಿದೆ.
ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಗಿಲ್ಕಿ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ವ್ಯಕ್ತಿಯ ಮೇಲೆ ಯುವಕರ ಗುಂಪು ದಾಳಿ ಮಾಡಿ, ಕಣ್ಣಿಗೆ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ತಲೆ, ಕೈ, ಕಾಲು ಹಾಗೂ ದೇಹದ ಭಾಗಗಳಿಗೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಗುಂಪು ಪರಾರಿಯಾಗಿದೆ.
ಇತ್ತೀಚೆಗೆ ವರುಣಾದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆ ಆಗಿತ್ತು. ಕಾರ್ತಿಕ್ ಗೂ ಹಾಗೂ ಇಂದು ಕೊಲೆಯಾದ ವೆಂಕಟೇಶ್ ಗೂ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ. ಮೂಲಗಳ ಪ್ರಕಾರ ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರವಿತ್ತು ಎನ್ನಲಾಗಿದೆ. ಕಾರ್ತಿಕ್ ಕಡೆಯ ಗುಂಪು ದಾಳಿ ನಡೆಸಿ ಪ್ರತಿಕಾರಕ್ಕಾಗಿ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ನಜರ್ ಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.


