ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ಮೇಲೆ ದೋಷಾರೋಪ ನಿಗದಿಯನ್ನು ನ್ಯಾಯಾಲಯವು ನವೆಂಬರ್ 3ಕ್ಕೆ ಮುಂದೂಡಿದೆ.
ಎರಡನೇ ಆರೋಪಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದು ಆದರೆ ಕೆಲವೇ ನಿಮಿಷಕ್ಕೆ ವಿಚಾರಣೆ ಮುಗಿದು ದೋಷಾರೋಪ ನಿಗದಿಯನ್ನು ಮುಂದೂಡಲಾಗಿದೆ. ಅಲ್ಲದೆ ದೋಷಾರೋಪ ನಿಗದಿ ಮಾಡುವ ದಿನದಂದು ಕಡ್ಡಾಯವಾಗಿ ಎಲ್ಲ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ರೇಣುಕಾ ಸ್ವಾಮಿ ಕೊಲೆಯಾದ ಸುಮಾರು ಒಂದೂವರೆ ವರ್ಷದ ಬಳಿಕ ಇದೀಗ ದೋಷಾರೋಪ ನಿಗದಿ ಆಗಲಿದೆ. ನವೆಂಬರ್ 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಮೇಲೆ ಪೊಲೀಸರು ಹೇರಿರುವ ಆರೋಪಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ. ಒಂದು ವೇಳೆ ಆರೋಪಿಗಳು ತಮ್ಮ ಮೇಲಿರುವ ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗಲಿದೆ.
ಒಂದೊಮ್ಮೆ ಆರೋಪಿಗಳು ಆರೋಪಗಳನ್ನು ನಿರಾಕರಿಸಿದರೆ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ. ಸಾಕ್ಷ್ಯಗಳ ವಿಚಾರಣೆಗೆ ದಿನಾಂಕವನ್ನು ನಿಗದಿ ಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಸಾಕಷ್ಟು ಸಂಖ್ಯೆಯ ಸಾಕ್ಷ್ಯಗಳು ಇರುವ ಕಾರಣ ಸಹಜವಾಗಿಯೇ ಎಲ್ಲರ ವಿಚಾರಣೆ, ಮರು ವಿಚಾರಣೆಗಳಿಗೆ ಸುಮಾರು ಒಂದಿರಂದ ಎರಡು ವರ್ಷ ಸಮಯ ಹಿಡಿಯುವ ಸಾಧ್ಯತೆ ಇದೆ.
ನವೆಂಬರ್ 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಪಾಲಿಗೆ ಅತ್ಯಂತ ಮಹತ್ವದ ದಿನ ಆಗಿರಲಿದೆ. ಅಂದು ನಿಗದಿ ಆಗುವ ಆರೋಪಗಳ ಮೇಲೆಯೇ ಮುಂದಿನ ವಿಚಾರಣೆ ನಡೆಯಲಿದೆ. ಪೊಲೀಸರು ಅಥವಾ ತನಿಖಾಧಿಕಾರಿಗಳು ಈ ದೋಷಾರೋಪವನ್ನು ನಿಗದಿ ಮಾಡಲಿದ್ದಾರೆ. ದರ್ಶನ್ ವಿರುದ್ಧ ಯಾವ ಯಾವ ಆರೋಪಗಳನ್ನು ಹೊರಿಸಲಿದ್ದಾರೆ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಈಗ ಜೈಲಿನಲ್ಲಿರುವ ಏಳು ಜನರು ಮಾತ್ರವೇ ಅಲ್ಲದೆ ಪ್ರಕರಣದ ಎಲ್ಲ ಆರೋಪಿಗಳ ಮೇಲೂ ದೋಷಾರೋಪದ ನಿಗದಿ ಆಗಲಿದೆ. ಇವರಲ್ಲಿ ಕೆಲವರ ಹೆಸರನ್ನು ಕೈಬಿಡುವ ಸಾಧ್ಯತೆಯೂ ಸಹ ಇದೆ.
ದರ್ಶನ್ ಪರ ವಕೀಲರು ಈ ಹಿಂದೆಯೇ ವಿಚಾರಣೆ ವೇಳೆ ಶೀಘ್ರವಾಗಿ ದೋಷಾರೋಪ ನಿಗದಿ ಮಾಡಿ ಸಾಕ್ಷ್ಯಗಳ ವಿಚಾರಣೆ ಆರಂಭ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ಸರ್ಕಾರಿ ವಕೀಲರು ದೋಷಾರೋಪ ನಿಗದಿಗೆ ಸಮಯ ಕೇಳಿದ್ದರು. ದರ್ಶನ್ ಪರ ವಕೀಲರು, ತಾವು ವಿಚಾರಣೆ ಎದುರಿಸಿಯೇ ನ್ಯಾಯಾಲಯದಿಂದ ಹೊರಬರುವುದಾಗಿ ಹೇಳಿದ್ದರು. ಅಲ್ಲದೆ, ನ್ಯಾಯಾಧೀಶರು ಸಹ, ಎರಡೂ ಕಡೆಯವರು ಸಾಕ್ಷ್ಯಗಳ ವಿಚಾರಣೆಗೆ ಸಹಕರಿಸಬೇಕು ಎಂದು ಮನವಿಯನ್ನು ಮಾಡಿದ್ದರು.


