Online News in ಕನ್ನಡ

ಪ್ರಧಾನಿ ಮೋದಿ ಆಳ್ವಿಕೆಯಲ್ಲಿ ಭಾರತ ಎಷ್ಟು ಸುರಕ್ಷಿತ ?

ಕಾಲಮಾನ-3

ಕೆ.ದೀಪಕ್, ಪ್ರಧಾನ ಸಂಪಾದಕ

ವಿಜಯಕಾಲ ದಿನಪತ್ರಿಕೆ

ನವ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ಸೋಮವಾರ ಸಂಜೆ ಹುಂಡೈ ಐ-20 ಕಾರಿನಲ್ಲಿ ಭಾರೀ ಸ್ಪೋಟ ಸಂಭವಿಸಿ 13ಕ್ಕೂ ಹೆಚ್ಚು ಮಂದಿ ನಾಗರಿಕರು ಬಲಿಯಾಗಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ನಿಷೇಧಿತ ಜೈಷ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸಾರ್ ಜಗ್ವತ್-ಉಲ್-ಹಿಂದ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಉಗ್ರರ ಜಾಲವನ್ನು ಜಮ್ಮು ಕಾಶ್ಮೀರ ಪೊಲೀಸರು ಭೇದಿಸಿ ಎಂಟು ಮಂದಿಯನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ನವ ದೆಹಲಿಯಲ್ಲಿ ಹೈ- ಅಲ್ರ್ಟ್ ವಲಯದಲ್ಲಿಯೇ ಸ್ಪೋಟ ಸಂಭವಿಸಿರುವುದು ಭಾರತದ ಉತ್ತರ ತತ್ತರಿಸುವಂತ್ತಾಗಿದ್ದು, ಇಡೀ ದೇಶ ಅಭದ್ರತೆಯೆಡೆಗೆ ಸಾಗುತ್ತಿರುವ ಆತಂಕ ನಿರ್ಮಾಣಗೊಂಡಿದೆ. 

ದೇಶದ ಜನರಿಗೆ `ಭಯೋತ್ಪಾದನಾ ಮುಕ್ತ ಭಾರತ’ ಸೃಷ್ಟಿಸುವ ಭ್ರಮೆ ಹುಟ್ಟಿಸಿ 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷಗಳ ಆಡಳಿತದಲ್ಲಿ ಭಾರತಾದ್ಯಂತ ವಿವಿಧ ರಾಜ್ಯಗಳೂ ಸೇರಿದಂತೆ 37ಕ್ಕೂ ಹೆಚ್ಚು ಉಗ್ರರ ವಿದ್ವಂಸಕ ಕೃತ್ಯಗಳು ನಡೆದಿರುವುದು ದಾಖಲಾಗಿದೆ. ಇದೀಗ ದೇಶವನ್ನಾಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಇದರ ನಾಯಕರು ಕೇವಲ ಹಿಂದುತ್ವವಾದ, ಪಾಕಿಸ್ತಾನ, ಶ್ರೀರಾಮ, ಸಂವಿಧಾನ, ಹಿಂದೂ ರಾಷ್ಟ್ರ ನಿರ್ಮಾಣ, ಮುಸ್ಲಿಂ ವಿರೋಧಿ ಅಜೆಂಡಾಗಳಂತಃ ಭಾವನಾತ್ಮಕ ವಿಷಯಗಳನ್ನು ಸರ್ವಕಾಲವೂ ಜೀವಂತವಾಗಿಟ್ಟು ಗಂಭೀರ ಸಮಸ್ಯೆಗಳನ್ನು ಜನರಿಂದ ಬಚ್ಚಿಟುವ ತಂತ್ರ ನಡೆಸುತ್ತಿದೆಯೆ ಎಂಬ ಪ್ರಶ್ನೆ ಎದುರಾಗಿದೆ. 

ಕರ್ನಾಟಕದ ಜೈಲುಗಳಲ್ಲಿ ಡ್ರಗ್ಸ್, ಸೆಲ್ ಫೋನ್, ಮದ್ಯಪಾನ ದೊರಕಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೇಳುವ ರಾಜ್ಯ ಬಿಜೆಪಿ ನಾಯಕರು ಈ ಘನಘೋರ ದುರಂತಗಳಿಗೆ ತಮ್ಮದೇ ಪಕ್ಷದ ಸರಕಾರದ ಯಾವ ನಾಯಕರಿಂದ ರಾಜೀನಾಮೆ ಪಡೆದು ದೇಶಕ್ಕೆ ನೈತಿಕ ಪ್ರಜ್ಞೆಯನ್ನು ರುಜುವಾತು ಮಾಡುವರೇ ? ಆರ್‍ಎಸ್‍ಎಸ್ ಸಂಘಟನೆಯ ಶತಮಾನೋತ್ಸವ ಮತ್ತು ಅದರ ಅಜೆಂಡಗಳ ಜಾರಿಯಲ್ಲಿ ಮಗ್ನಗೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ನಾಯಕರು ದೇಶದ ಭದ್ರತಾ ವ್ಯವಸ್ಥೆಯನ್ನು ಮರೆತಂತ್ತಿದೆ.

ಏಕೆಂದರೆ, ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆದಿರುವ ಹತ್ತಾರು ಭಯೋತ್ಪಾದಕ ದಾಳಿಗಳಲ್ಲಿ ಪ್ರಮುಖ ಘಟನೆಗಳನ್ನು ಅವಲೋಕಿಸಿದರೆ ದೇಶದ ಭದ್ರತಾ ವ್ಯವಸ್ಥೆ ಲೋಪ ಸ್ಟಷ್ಟವಾಗಿ ಗೋಚರಿಸುತ್ತದೆ. ಉದಾಹರಣೆಗೆ: 2015ರ ಜುಲೈ 27ರಂದು ಪಂಜಾಬಿನ ಗುರುದಾಸಪುರದ ದೀನ ನಗರದಲ್ಲಿ ಉಗ್ರಗಾಮಿಗಳು ಭಾರತೀಯ ಸೇನೆಯ ಮಾದರಿ ಸಮವಸ್ತ್ರಧಾರಿಗಳಾಗಿ ಪೊಲೀಸ್ ಠಾಣೆಗೆ ನುಗ್ಗಿ ಮೂವರು ನಾಗರಿಕರು ಮತ್ತು ನಾಲ್ವರು ಪೊಲೀಸರು ಸೇರಿದಂತೆ 10 ಮಂದಿ ಬಲಿಯಾಗಿದ್ದರು. ಇದು ಪಂಜಾಬಿನಲ್ಲಿ ನಡೆದ ಮೊಟ್ಟ ಮೊದಲ ದೊಡ್ಡ ಉಗ್ರರ ದಾಳಿಯಾಗಿತ್ತು. 

` ಭಯೋತ್ಪಾದನಾ ಮುಕ್ತ ಭಾರತ’ ನಿರ್ಮಾಣದ ಸಂಕಲ್ಪದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ 37 ಉಗ್ರರ ದಾಳಿ ನಡೆದು 100ಕ್ಕೂ ಹೆಚ್ಚು ಭಾರತೀಯ ಸೈನಿಕರು ಮತ್ತು ನಾಗರೀಕರು ಹುತಾತ್ಮರಾಗಿದ್ದಾರೆ. ಭಯೋತ್ಪಾದಕರು ನಡೆಸಿರುವ ಈವರೆಗಿನ ಎಲ್ಲ ದಾಳಿಗಳಲ್ಲಿ ರಾಷ್ಟ್ರೀಯ ಭದ್ರತಾ ಲೋಕ ಎದ್ದು ಕಾಣುತ್ತಿದೆ. ಆರ್‍ಎಸ್‍ಎಸ್ ಶತಮಾನೋತ್ಸವದ ಸಂಭ್ರಮದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅದರ ನಾಯಕರು ದೇಶದ ಸುರಕ್ಷತೆಯನ್ನು ಮರೆತಂತ್ತಿದೆ. ಕರ್ನಾಟಕದ ಜೈಲುಗಳಲ್ಲಿ ಮಾದಕ ವಸ್ತುಗಳು, ಸೆಲ್ ಫೋನ್ ಪತ್ತೆಯಾಗಿದ್ದಕ್ಕೆ ನೈತಿಕ ಹೊಣೆ  ಹೊತ್ತು ರಾಜ್ಯದ ಮುಖ್ಯಮಂತ್ರಿಗಳ ರಾಜೀನಾಮೆ ನೀಡಬೇಕೆಂದು ಆಗ್ರಹಿಸುವ ರಾಜ್ಯ ಬಿಜೆಪಿ ನಾಯಕರೇ ಈಗ ಹೇಳಿ…. ನಿರಂತರ ಭಯೋತ್ಪಾದಕ ದಾಳಿ, ರಾಷ್ಟ್ರೀಯ ಭದ್ರತಾ ವೈಫಲ್ಯ ಹಾಗೂ ಅಮಾಯಕ ಸೈನಿಕರು ಮತ್ತು ನಾಗರೀಕರ ಬಲಿಗೆ ದೇಶದ ಜನತೆ ಯಾರ ರಾಜೀನಾಮೆ ಕೇಳಬೇಕು ‘

2016ರ ಜನವರಿ 2ರಂದು ಪಂಜಾಬಿನ ಪಟಾನ್ ಕೋಟಿನ ಭಾರತೀಯ ವಾಯು ನೆಲೆಗೆ ಆರು ಮಂದಿ ಭಯೋತ್ಪಾದಕರು ನುಸುಳಿ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಸಿಬ್ಬಂದಿಗಳು ಮತ್ತು ಉಗ್ರರ ನಡುವೆ ದೀರ್ಘಾವದಿ ಗುಂಡಿನ ಕಾಳಗ ನಡೆದು ಏಳು ಮಂದಿ ಭದ್ರತಾ ಸಿಬ್ಬಂದಿಗಳು ಮತ್ತು 6 ಮಂದಿ ಉಗ್ರರು ಹತ್ಯೆಯಾದರು. ಇದೊಂದು ಬಹುದೊಡ್ಡ ಭದ್ರತಾ ಲೋಪಕ್ಕೆ ಸಾಕ್ಷಿಯಾಯಿತು. ಇದೇ ಮಾದರಿ 2016ರಲ್ಲಿ ಜಮ್ಮು ಕಾಶ್ಮೀರದ ಉರಿ ಜಿಲ್ಲೆ ಸೇನಾ ನೆಲೆಯ ಮೇಲೆ ನಾಲ್ವರು ಉಗ್ರರು ದಾಳಿ ನಡೆಸಿ 19 ಮಂದಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದರು. ನಂತರದ ಕಾರ್ಯಾಚರಣೆಯಲ್ಲಿ ಎಲ್ಲ ನಾಲ್ಕು ಉಗ್ರರನ್ನು ಸೆದೆಬಡಿಯಲಾಯಿತು. ಈ ಘಟನೆ ರಾಷ್ಟ್ರೀಯ ಭದ್ರತಾ ಲೋಪದ ಮತ್ತೊಂದು ಸಾಕ್ಷಿಯಾಗಿ ಉಳಿಯಿತು. 

2017ರ ಜುಲೈ 10ರಂದು ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿ 9 ಮಂದಿ ಯಾತ್ರಿಕರನ್ನು ಹತ್ಯೆ ಮಾಡಿದ್ದರು. ಮತ್ತೊಂದು ದುರದೃಷ್ಟಕರ ಸಂಗತಿಯೆಂದರೆ, 2018ರ ಫೆಬ್ರವರಿ 10ರಂದು ಶಸ್ತ್ರಾಸ್ತ್ರಧಾರಿಗಳ ಗುಂಪು ಸೈನಿಕರ ವಸತಿ ಸಮ್ಮುಚ್ಛಯಕ್ಕೆ ನುಗ್ಗಿ 6 ಮಂದಿ ಸೈನಿಕರು ಮತ್ತು ಓರ್ವ ನಾಗರಿಕರನ್ನು ಹತ್ಯೆಗೈದಿದ್ದರು.  ಈ ಘಟನೆಯನ್ನೂ ರಾಷ್ಟ್ರೀಯ ಭದ್ರತಾ ವೈಫಲ್ಯ ಎಂದು ಕರೆಯಲಾಯಿತು. 

2019 ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ವಾಹನ ಬೆಂಗಾವಲಿನಲ್ಲಿ ಸಾಗುವಾಗ ಓರ್ವ ಉಗ್ರ ಆತ್ಮಹುತಿ ಬಾಂಬರ್ ಮೂಲಕ ಸಿಆರ್‍ಪಿಎಫ್ ವಾಹನವನ್ನು ಸ್ಪೋಟಿಸಿದ ಪರಿಣಾಮ 40 ಮಂದಿ ಭಾರತೀಯ ಸೈನಿಕರು ಹುತಾತ್ಮರಾದರು. ಸಣ್ಣದೊಂದು ಕಬ್ಬಿಣದ ತುಂಡನ್ನೂ ಸಾಗಿಸುವುದು ಅಸಾಧ್ಯ ಎನಿಸುವ ಸ್ಥಳಕ್ಕೆ ಭಾರೀ ಪ್ರಮಾಣದ ಸ್ಪೋಟಕಗಳನ್ನು ಸಾಗಿಸಿದ್ದು ಹೇಗೆ ಎಂಬ ಬಗ್ಗೆ ಈವರೆಗೆ ಕೇಂದ್ರ ಸರಕಾರ ದೇಶದ ಜನತೆಗೆ ತಿಳಿಸಿಲ್ಲ. ಇನ್ನು ಲೋಕಸಭಾ ಚುನಾವಣಾ ಪೂರ್ವದಲ್ಲಿ ಸಂಭವಿಸಿದ ಈ ಘನಘೋರ ದುರಂತರ ಬಗ್ಗೆ ಬಹಳಷ್ಟು ಭಿನ್ನರಾಗ ಕೇಳಿ ಬಂದಿತ್ತಾದರೂ, ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಈ ಕೃತ್ಯಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಬಾಗಲಕೋಟ್ ವಾಯು ಕಾರ್ಯಾಚರಣೆಯನ್ನು ನಡೆಸಿ ಉಗ್ರರ ನೆಲೆಗಳನ್ನು ನಾಶ ಪಡಿಸಿತು. 

2020 ಮಾರ್ಚ್ 21ರಂದು ಛಿತ್ತೀಸ್ಗಡ್‍ನ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 17 ಮಂದಿ ಸೈನಿಕರು ಹತರಾದರು. ಮತ್ತು ಇದೇ ಛತ್ತೀಸ್ಗಡ್‍ದ ಬಿಜಾಪುರದಲ್ಲಿ 2021, ಏಪ್ರಿಲ್ 3ರಂದು 400 ಮಂದಿ ಮಾವೋವಾದಿಗಳು ದಾಳಿ ನಡೆಸಿ 22 ಮಂದಿ ಸೈನಿಕರನ್ನು ಕೊಂದರು. ಮುಂದುವರೆದು, 2023ರಲ್ಲಿ ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಉಗ್ರರ ದಾಳಿಗೆ 5 ಮಂದಿ ಸೈನಿಕರು ಹುತಾತ್ಮದರು. ಇವುಗಳು ಭಾರತೀಯ ಬೇಹುಗಾರಿಕೆ ಮತ್ತು ಭದ್ರತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದವು.

ಇನ್ನು ಇದೇ ವರ್ಷ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ನಾಗರೀಕರು ಹತರಾದರು. ಅನೇಕರು ಗಾಯಗೊಂಡರು. ತಮ್ಮ ಹೆಂಡತಿ, ಮಕ್ಕಳು, ಸ್ನೇಹಿತರೊಂದಿಗೆ ಪ್ರವಾಸದ ಸಂಭ್ರಮದಲ್ಲಿದ್ದವರ ಮೇಲೆ ಮೂರು ಮಂದಿ ಉಗ್ರರು ಎಂ4 ಕಾರ್ಬಿನ್ಸ್ ಮತ್ತು ಎಕೆ-47 ಬಂದೂಕುಗಳಿಂದ ದಾಳಿ ನಡೆಸಿದ್ದರು. ಅತ್ಯಂತ ಸುರಕ್ಷಿತ ಮತ್ತು ಸುಂದರ ತಾಣಗಳಲ್ಲಿ ಒಂದಾಗಿದ್ದ ಪಹಲ್ಗಾಮ್ ಪ್ರವಾಸಿ ತಾಣದೊಳಗೆ ಉಗ್ರರು ಪ್ರವೇಶ ಪಡೆದದ್ದಾದರೂ ಹೇಗೆ. ಇದಕ್ಕೆ ಕಾರಣರಾರು ? ಎಂಬ ಬಗ್ಗೆ ಇವತ್ತಿಗೂ ಮಾಹಿತಿ ದೊರಕಿಲ್ಲ. ಅಷ್ಟೇಕೆ, ಪಾರ್ಲಿಮೆಂಟ್ ಒಳಗೆ ಯುವಕರು ಸ್ಲೋಕರ್ ಬಾಂಬ್‍ಗಳನ್ನು ಸಿಡಿಸಿದ್ದೂ ಸಹ ದೊಡ್ಡ ಸುದ್ದಿಯಾಗಿತ್ತು. 

ಹೀಗೆ… ದೇಶದೊಳಗೆ ಮತ್ತು ದೇಶದ ಗಡಿಯೊಳಗೆ ಭಯೋತ್ಪಾದಕ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇದ್ದು ಚುನಾವಣಾ ಪೂರ್ವದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸುವುದಾಗಿ ಹೇಳಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಹುಸಿಯಾಗಿದೆ. ಕೇವಲ ಹಿಂದುತ್ವ, ಪಾಕಿಸ್ತಾನ, ಮುಸ್ಲಿಂ, ಶ್ರೀರಾಮ, ಸಂವಿಧಾನ ಎಂಬ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಎನ್‍ಡಿಎ ಸರಕಾರ ಈವರೆಗೆ ನಡೆದ ಒಂದೇ ಒಂದು ಭಯೋತ್ಪಾದಕ ದಾಳಿಯ ಬಗ್ಗೆ ಸತ್ಯ ಸಂಗತಿಯನ್ನು ಜನತೆಗೆ ತಿಳಿಸಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳನ್ನು ಎದುರಿಸಿಲ್ಲ. 

ಇವರ ವೈಫಲ್ಯಗಳನ್ನು ಪ್ರಶ್ನಿಸುವವರನ್ನು ದೇಶ ದ್ರೋಹಿಗಳೆಂದು ನಿಂದಿಸುವುದನ್ನು ಮಾತ್ರ ಇವರು ಮರೆಯಲ್ಲ. 

 

 

Call Now Button