ಕಾಲಮಾಲ – 4
ಕೆ.ದೀಪಕ್, ಪ್ರಧಾನ ಸಂಪಾದಕ, ವಿಜಯಕಾಲ ದಿನಪತ್ರಿಕೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ನಿರೀಕ್ಷೆಗೂ ಮೀರಿದ ಜನಾದೇಶ ದೊರಕಿದ್ದು ಡಬಲ್ ಇಂಜಿನ್ ಸರಕಾರವು ಈ ಎಲೆಕ್ಷನಲ್ಲಿ ಡಬಲ್ ಸೆಂಚ್ಯುರಿ ಭಾರಿಸಿ ಎದುರಾಳಿ ಆರ್ ಜೆ ಡಿ -ಕಾಂಗ್ರೆಸ್ ನೇತೃತ್ವದ ಮಹಾ ಘಟ ಬಂಧನ್ ಮೈತ್ರಿಕೂಟವನ್ನು ಘಾಸಿಗೊಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರಕಾರದ ನರವಿನೊಂದಿಗೆ `ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ’ಯಡಿ ಒಂದೂವರೆ ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿದ ತಂತ್ರ ಫಲಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿz ಬಿಜೆಪಿಯ ಮತ ಚೋರಿ ವಿರುದ್ಧದ ಅಭಿಯಾನ ಈ ಚುನಾವಣೆ ಮೇಲೆ ಚೂರೂ ಪರಿಣಾಮ ಬೀರದೆ ಹೋದದ್ದು ಪ್ರಜಾಪ್ರಭುತ್ವದ ದೊಡ್ಡ ದುರಂತ.
ವಿಧಾನಸಭೆಯ ಒಟ್ಟು 243 ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟ 202 ಸ್ಥಾನಗಳನ್ನೂ, ಎಂಜಿಬಿ (ಮಹಾ ಘಟ ಬಂಧನ್) 35 ಸ್ಥಾನ ಹಾಗೂ ಇತರರು 6 ಸ್ಥಾನಗಳನ್ನು ಪಡೆದರೆ, ಬಿಜೆಪಿ 89 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹಮ್ಮಿದೆ. ಒಟ್ಟು ಚಲಾವಣೆಗೊಂಡ ಮತದಾನದಲ್ಲಿ ಎನ್ಡಿಎ ಶೇ. 46.6ರಷ್ಟು ಮತಗಳನ್ನು ಪಡೆದರೆ, ಎಂಜಿಬಿ ಶೇ. 37.9ರಷ್ಟು ಮತಗಳನ್ನು ಪಡೆದಿದೆ. ಕಳೆದ 2020ರ ಚುನಾವಣೆಗೆ ಹೋಲಿಕೆ ಮಾಡಿದರೆ ಎಂಜಿಪಿ ಮತಗಳಿಕೆಯಲ್ಲಿ ಚಿಟಿಕಿ ಗಾತ್ರದ (ಶೇ.0.5) ಏರಿಕೆಯಾಗಿದೆ. ಆದರೆ, 2020ರಲ್ಲಿ ಶೇ. 37.9ರಷ್ಟು ಮತ ಪಡೆದಿದ್ದ ಎನ್ಡಿಎ ಈ ಚುನಾವಣೆಯಲ್ಲಿ ಶೇ.9ರಷ್ಟು ಮತಗಳಿಕೆಯನ್ನು ಹೆಚ್ಚಾಗಿಸಿಕೊಂಡಿದೆ.
ಎನ್ಡಿಎ ತಂತ್ರಗಾರಿಕೆ !
ಆರಂಭದಲ್ಲಿ ಮುಖ್ಯಮಂತ್ರಿ ನಿತೀಶ್ಕುಮಾರ್ ನೇತೃತ್ವದ ಸರಕಾರದ ಮೇಲೆ ವಿರೋಧಿ ಅಲೆಯಿದೆ ಎಂದು ಹೇಳಲಾಗಿತ್ತು. ಇದನ್ನು ಮನಗಂಡ ಬಿಜೆಪಿ ನಾಯಕರು ಸೀಟು ಹಂಚಿಕೆ, ನಾಯಕತ್ವದ ಹೊಣೆಗಾರಿಕೆ, ಮುಖ್ಯಮಂತ್ರಿ ಘೋಷಣೆ ಅಂತಹ ಸೂಕ್ಷ್ಮ ವಿಚಾರದಲ್ಲಿ ಉದಾರಿತನ ತೋರಿದೆ. ಆ ಕಾರಣದಿಂದಲೇ ಪರಸ್ಪರ ಹಠಕ್ಕೆ ಬೀಳದೆ ಜೆಡಿಯು ಮತ್ತು ಬಿಜೆಪಿ ಸಮಾನವಾಗಿ 101 ಸ್ಥಾನಗಳನ್ನು ಹಂಚಿಕೊಂಡಿತು. ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ವಯಸ್ಸು, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯನ್ನೂ ಘೋಷಿಸದೆ ಜಾಣತನ ಮೆರೆಯಿತು. ಬಿಹಾರ ಬಿಜೆಪಿಯಲ್ಲಿ ಪ್ರಭಾವಿ ನಾಯಹಕರ ಕೊರತೆ ಇದ್ದುದ್ದರಿಂದ ಸ್ವತಃ ಕೇಂದ್ರ ನಾಯಕರೇ ಚುನಾವಣೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡರು.
ಓಟು ಸಮೀಕರಣ !
ಬಿಜೆಪಿಯು ಬಿಹಾರದ ಮೇಲ್ವರ್ಗಗಳ ಮತಗಳನ್ನು ಸೆಳೆದರೆ, ಸಂಯುಕ್ತ ಜನತಾದಳವು ಅತೀ ಹಿಂದುಳಿದ ವರ್ಗಗಳ ಮತಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎನ್ಡಿಎ ಮೈತ್ರಿಯ ಅಂಗ ಪಕ್ಷ ಹಾಗೂ ಹಿರಿಯ ದಲಿತ ನಾಯಕ ರಾಮವಿಲಾಸ್ ಪಾಸ್ವಾನ್ ಅವರು ಸ್ಥಾಪಿಸಿದ ಲೋಕ ಜನಶಕ್ತಿ ಪಕ್ಷವು ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ದಲಿತರ ಮತಗಳನ್ನು ಪಡೆಯುವಲ್ಲಿ ಗೆದ್ದಿದೆ. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಓವೈಸಿ ನೇತೃತ್ವದ ಓಐಎಂಐಎಂ ಪಾರ್ಟಿ ತನ್ನ ಲೆಕ್ಕಾಚಾರದಲ್ಲಿ ಮುಗ್ಗರಿಸಿದೆ. ಇದಕ್ಕೆ ತದ್ವಿರುದ್ಧವಾಗಿ ಆರ್ಜೆಡಿ ಪಕ್ಷ ನಂಬಿದ್ದ ಯಾದವ ಸಮುದಾಯದ ಮತಗಳು, ಕಾಂಗ್ರೆಸ್ ನಂಬಿದ್ದ ಅಲ್ಪಸಂಖ್ಯಾತ ದಲಿತರ ಮತಗಳು ನಿರೀಕ್ಷೆಯ ಮಟ್ಟಕ್ಕೆ ಕೈ ಹಿಡಿಯಲಿಲ್ಲ. ಒಟ್ಟಾರೆ, ಜಾತಿ ಸಮೀಕರಣದಲ್ಲೂ ಎಂಜಿಬಿ ಎಡವಿದೆ.
ಈ ಅಂಶಗಳು ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಕಾರ್ಯತಂತ್ರಗಳೇ ವಿನಃ ಪ್ರಜಾಪ್ರಭುತ್ವದ ಆಶಯ ಎಂದು ಹೇಳಲಾಗದು. ಉದಾಹರಣೆಗೆ ಉದ್ಯೋಗ, ಕೂಲಿ ಅರಸಿ ಹೊರ ರಾಜ್ಯಗಳಲ್ಲಿ ದುಡಿಯುತ್ತಿರುವ ಸುಮಾರು 64 ಲಕ್ಷ ಮತದಾರರನ್ನು ಮತದಾರರ ಪರಿಷ್ಕರಣೆ ನೆಪದಲ್ಲಿ ಮತದಾರರ ಪಟ್ಟಿಯಿಂದ ಕಿತ್ತೆಸೆದದ್ದು ಬಿಹಾರ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆಯೆ ಆಗಿದೆ. ಈ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಕ್ರಮವೆಂದು ಪ್ರತಿಪಕ್ಷಗಳು ದೂರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮತದಾರರನ್ನು ಕೈಬಿಡುವುದು ಅವರ ಅಸ್ಥಿತ್ವವನ್ನೇ ನಾಶ ಮಾಡಿದಂತೆ ಎಂಬ ಅರಿವೂ ಬಿಹಾರದ ಜನತೆಗೆ ಬರಲಿಲ್ಲ.
ಎನ್ಡಿಎ ಕೂಟದ ಈ ತಂತ್ರಗಳಿಗೆ ಪರ್ಯಾಯವಾಗಿ ಆರ್ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಎಂಜಿಬಿ ಮೈತ್ರಿಕೂಟವು ಸಂವಿಧಾನ ರಕ್ಷಣೆ ಹೆಸರಿನಲ್ಲಿ ಚುನಾವಣೆ ಎದುರಿಸಿತ್ತಾದರೂ, ತಂತ್ರಗಾರಿಕೆಯಲ್ಲಿ ಎಡವಿತು. ಆರಂಭದಲ್ಲಿಯೆ ಸೀಟು ಹಂಚಿಕೆ ವಿಷಯದಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ ಉದಾರಿತನ ತೋರದೆ ಅಪಸ್ವರಕ್ಕೆ ಕಾರಣವಾಯಿತು. ತದ ನಂತರದಲ್ಲಿ ಹಲವು ಕ್ಷೇತ್ರಗಳಲ್ಲಿ ಎಂಜಿಬಿ ಅಭ್ಯರ್ಥಿಗಳ ವಿರುದ್ಧ ಸ್ವಪಕ್ಷೀಯರೆ ಸ್ಪರ್ಧಿಸಿ ಮತ ವಿಭಜನತೆ ಕಾರಣರಾದರು. ಬಂಡಾಯ ಶಮನಕ್ಕೆ ಗಂಭೀರ ಪ್ರಯತ್ನಗಳೂ ನಡೆಯಲಿಲ್ಲ. ಮತ್ತೊಂದೆಡೆ ಅನಾರೋಗ್ಯದ ಕಾರಣ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇರ ಚುನಾವಣಾ ಅಖಾಡಕ್ಕೆ ಇಳಿಯಲಿಲ್ಲ, ಬದಲಿಗೆ ಪುತ್ರ ತೇಜಸ್ವಿ ಯಾದವ್ ಅವರೇ ಚುನಾವಣೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು.
ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ನಡೆಸಿರುವ `ಮತಗಳ್ಳತನ’ವನ್ನು ಬಯಲಿಗೆಳೆದು ಜನಾಂದೋಲನಕ್ಕೆ ನಾಂದಿ ಹಾಡಿದ್ದರು. ಬಿಜೆಪಿಯು ಚುನಾವಣಾ ಅಕ್ರಮಗಳನ್ನು ಎಸಗುವ ಮೂಲಕ ಪ್ರಜಾಪ್ರಭುತ್ವದ ನಾಶಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ಎಲ್ಲ ರಾಜ್ಯಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಮಾಧ್ಯಮಗಳ ಮುಂದೆ ಸಾಕ್ಷಿ, ದಾಖಲೆಗಳನ್ನು ಬಿಡುಗಡೆಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಓರ್ವ ಮತಗಳ್ಳ ಎಂದು ಅಪಾದಿಸಿದರು. ಈ ವಿಚಾರಗಳು ನಿರೀಕ್ಷಿತ ಮಟ್ಟಕ್ಕೆ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯೂ ಆಗಲಿಲ್ಲ, ಚರ್ಚೆಗಳೂ ನಡೆಯಲಿಲ್ಲ. ಜನರೂ ಗಂಭೀರವಾಗಿ ಪರಿಗಣಿಸಲಿಲ್ಲ. ಭಾರತದಂತಃ ಬಹುದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ `ಮತಗಳ್ಳತನ’ ಚುನಾವಣಾ ವಿಷಯವಾಗದೆ ಹೋದದ್ದು ವಿಪರ್ಯಾಸ.
ಈ ಎಲ್ಲ ಅಂಶಗಳು ಚುನಾವಣೆಯ ಒಂದು ಭಾಗವಾದರೆ, ಮತ್ತೊಂದು ಪ್ರಬಲ ಕಾರಣ ಎನ್ಡಿಎ ಒಕ್ಕೂಟ ಘೋಷಿಸಿದ ಗ್ಯಾರಂಟಿ. ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳನ್ನು ಟೀಕಿಸುವ, ಗೇಲಿ ಮಾಡುವ ಬಿಜೆಪಿ ಅತ್ತ ಬಿಹಾರದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನೇ ಅನುಕರಣೆ ಮಾಡಿತು. ಇನ್ನೂ ಮುಂದೋಗಿ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತರಬೇಕಾದ ಯೋಜನೆಯನ್ನು ಕೇಂದ್ರ ಸರಕಾರದ ನೆರವು ಪಡೆದು ಚುನಾವಣಾ ದಿನಾಂಕ ಪ್ರಕಟಗೊಳ್ಳುವ ಒಂದೆರಡು ದಿನಗಳ ಮುಂಚೆ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯಡಿ ಒಂದೂವರೆ ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿತು. ಈ ಯೋಜನೆ ಜಾರಿ ಮತ್ತು ಅನುಷ್ಠಾನದಲ್ಲಿ ಚುನಾವಣಾ ಆಯೋಗದ ಸಹಕಾರವೂ ಇತ್ತು ಎಂಬ ಆರೋಪಗಳೂ ಇದೆ. ಆ ಕಾರಣದಿಂಂದಲೆ ಈ ಬಾರಿ ಮಹಿಳೆಯರ ಮತದಾನ ಪ್ರಮಾಣದಲ್ಲಿ ಶೇ. 11ರಷ್ಟು ಏರಿಕೆಯಾಗಿದೆ.
ಒಟ್ಟಾರೆ, ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತತೆ, ಸಾಮಾಜಿಕ ನ್ಯಾಯದಂತಃ ಮಹತ್ವದ ವಿಚಾರಗಳು ಚುನಾವಣೆಯ ವಿಷಯವಾಗದೆ, ಕೇವಲ ತಂತ್ರಗಾರಿಕೆ, ಜಾತಿ ಸಮೀಕರಣ, ಗ್ಯಾರಂಟಿಗಳಿಗೆ ಮತದಾರ ಮನ ಸೋಲುತ್ತಿರುವುದು ಅಪಾಯದ ಮುನ್ಸೂಚನೆ ಇರಬಹುದೆ ?


