ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಭಿಕ್ಕಟ್ಟು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆಗೆ ರಾಜ್ಯ ನಾಯಕರುಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಬುಧವಾರವೂ ಸಹ ಸತೀಶ್ ಜಾರಕಿ ಹೊಳಿ, ಬಿ.ಕೆ. ಹರಿಪ್ರಸಾದ್, ಬಸವರಾಜ ರಾಯರೆಡ್ಡಿ, ಕೆ.ಜೆ. ಜಾರ್ಜ್ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ನಾಯಕರು `ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಏನಿದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು’ ಎಂದಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆದಿಲ್ಲ. ಮುಖ್ಯಮಂತ್ರಿ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಇದೆ. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ಹಿರಿಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ಕಳೆದ ರಾತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಡಿ.ಕೆ. ಶಿವಕುಮಾರ್ ಅವರು ಎಲ್ಲರನ್ನೂ ಭೇಟಿ ಮಾಡುತ್ತಿದ್ದಾರೆ. ಬಹುಶಃ ಅವರನ್ನು ಭೇಟಿ ಮಾಡಿದ ಕಡೆಯ ಸಚಿವ ನಾನೇ ಇರಬೇಕು. ಈ ಹಿಂದೆ ಡಿಕೆ ಸುರೇಶ್ ಸಹ ಭೇಟಿ ಮಾಡಿದ್ದರು ಎಂದು ತಿಳಿಸಿದರು.
ನಾನೂ ಸರಕಾರದ ಒಂದು ಭಾಗ. ಮುಂದಿನ ಚುನಾವಣೆ, ಅಭಿವೃದ್ಧಿ, ಇತ್ತೀಚಿನ ಬೆಳವಣಿಗೆ ಬಗ್ಗೆ ಮಾತನಾಡಿದ್ದೇನೆ. ಚರ್ಚೆಗಳು ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ.
ಡಿಕೆ ಶಿವಕುಮಾರ್ ಅವರು ಮೊದಲ ದಿನದಿಂದಲೂ ಸಿಎಂ ಆಗುವ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದೆ. ಒತ್ತಾಸೆ ವ್ಯಕ್ತಪಡಿಸುವುದು ತಪ್ಪಲ್ಲ. ಹಲವಾರು ಮಂದಿಗೆ ಸಿಎಂ ಆಗಬೇಕೆಂಬ ಆಸೆ ಇದೆ. ಹಾಗೆಯೇ ಅರ್ಹರೂ ಇದ್ದಾರೆ. ಆದರೆ, ಈಗ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ.
ಈನಡುವೆ, ಸತೀಶ್ ಜಾರಕಿಹೊಳಿ ಅವರು ತಾವು ಸಿದ್ದರಾಮಯ್ಯ ಅವರನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಮೊದಲಿನಿಂದಲೂ ಅವರೊಂದಿಗೆ ನಾವು ರಾಜಕೀಯವಾಗಿ ಗುರುತಿಸಿಕೊಂಡು ಬಂದಿದ್ದೇವೆ. ಅವರನ್ನು ಮಾಡಿ, ಇವರನ್ನು ಮಾಡಬೇಡಿ ಎಂದು ನಾನಾಗಿಯೇ ಯಾರಿಗೂ ಹೇಳಲ್ಲ. ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆ ನೋಡೋಣ. ಆನಂತರದಲ್ಲಿ ಯೋಚಿಸುತ್ತೇನೆ ಎಂದು ಡಿಕೆಶಿಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ
ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ: ಶಾಸಕ ಬಸವರಾಜ ರಾಯರೆಡ್ಡಿ
` ಕಾಂಗ್ರೆಸ್ಗೆ ಬಹುಮತ ಬಂದು ಶಾಸಕಾಂಗ ಸಭೆ ನಡೆಸಿದಾಗ ನಾವೆಲ್ಲ ಸಿದ್ದರಾಮಯ್ಯ ಪರ ಮತ ನೀಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಅಂದು ಯಾರೂ ಸಹ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತನಾಡಿಲ್ಲ. ಹಾಗಾಗಿ ನಾವೆಲ್ಲ ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಇರಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಪುನರ್ ಉಚ್ಛರಿಸಿದ್ದಾರೆ.
ಕಾಂಗ್ರೆಸ್ ಮಾತ್ರ ದಲಿತ ಸಿಎಂ ಮಾಡೋದು:
ಈನಡುವೆ, ಕಾಂಗ್ರೆಸ್ ಈಗಾಗಲೇ ಅನೇಕ ರಾಜ್ಯಗಳಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದೆ. ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರಿದ್ದಾರೆ. ಅರ್ಹ, ಸಮರ್ಥರಿದ್ದಾರೆ ಅವರನ್ನು ಏಕೆ ಮಾಡಬಾರದು ಎಂದು ಪತ್ರಕರ್ತರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು. ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಪಕ್ಷ ಕೊಟ್ಟಿದೆ. ಅದಕ್ಕಿಂತ್ತ ದೊಡ್ಡ ಹುದ್ದೆಯಾವುದಿದೆ ಹೇಳಿ ಎಂದರಲ್ಲದೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆದಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ನೋಡೋಣ ಎಂದರು.


