Online News in ಕನ್ನಡ

ದ್ವೇಷ ಪ್ರೇಮಿ ಬಿಜೆಪಿ ಮತ್ತು ದ್ವೇಷ ಭಾಷಣ ವಿಧೇಯಕ : ಪತ್ರಕರ್ತ ಕೆ.ದೀಪಕ್ ಸಂಪಾದಕೀಯ..!

ಕೆ.ದೀಪಕ್,
ಪ್ರಧಾನ ಸಂಪಾದಕ
ವಿಜಯಕಾಲ ದಿನಪತ್ರಿಕೆ
ಕಾಲಮಾನ-9

ರಾಷ್ಟ್ರಕವಿ `ಕುವೆಂಪು’ ತಮ್ಮ ನಾಡಗೀತೆಯಲ್ಲಿ `ಸರ್ವಜನಾಂಗದ ಶಾಂತಿಯ ತೋಟ’ದ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದೇ ಆಶಯವನ್ನು ಹೊತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ `ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025′ ಅನ್ನು ಜಾರಿಗೆ ತರಲು ಮುಂದಾಗಿದೆ. ರಾಜ್ಯ ಸರಕಾರದ ಈ ನಡೆಯನ್ನು ದ್ವೇಷ ಪ್ರೇಮಿ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಹೋರಾಟವನ್ನೂ ಆರಂಭಿಸಿದ್ದಾರೆ. ಅಭಿವ್ಯಕ್ತಿಗೂ, ವಾಕ್ ಸ್ವಾತಂತ್ರ್ಯಕ್ಕೂ, ಸಹಜ ಸಂವಹನಕ್ಕೂ, ದ್ವೇಷ ಭಾಷಣಕ್ಕೂ ವ್ಯತ್ಯಾಸವೇ ಅರಿಯದ ಬಿಜೆಪಿ ಈ ಹೊಸ ವಿಧೇಯಕವನ್ನು ವಿರೋಧಿಸುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.
ಅಷ್ಟಕ್ಕೂ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ರಲ್ಲಿ ಏನಿದೆ ? ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಮತ್ತು ಪ್ರಚಾರವನ್ನು ಮತ್ತು ಸಮಾಜದಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಸಮ್ಮೂಹ ಅಥವಾ ಸಂಸ್ಥೆಗಳ ವಿರುದ್ಧ ಅಸಾಮರಸ್ಯ ದ್ವೇಷವನ್ನು ಹುಟ್ಟಿಸುವಂಥ ಅಪರಾಧಗಳನ್ನು ಪ್ರತಿಬಂಧಿಸುವುದು ಮತ್ತು ತಡೆಗಟ್ಟುವುದು ಮತ್ತು ಅಂಥ ಅಪರಾಧಗಳಿಗೆ ದಂಡನೆ ವಿಧಿಸುವುದು ಮತ್ತು ಸಂತ್ರಸ್ಥರಿಗೆ ತಕ್ಕ ಪರಿಹಾರವನ್ನು ಒದಗಿಸುವುದು, ಈ ವಿಧೇಯಕದ ಉದ್ದೇಶವಾಗಿದೆ. ಇದರಲ್ಲಿ ತಪ್ಪೇನಿದೆ ಹೇಳಿ ? ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ ಪತ್ರಕರ್ತರೂ ಸೇರಿದಂತೆ ನೂರಾರು ಸಮಾಜಿಕ ಹೋರಾಟಗಾರರನ್ನು ಜೈಲಿಗೆ ಹಾಕಿದ ಪ್ರಕರಣಗಳು ಕಣ್ಮುಂದೆ ಇರುವಾಗ, ಇಲ್ಲಿ ಬಿಜೆಪಿ ನಾಯಕರು
ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಭಾಷಣ ಮಾಡುತ್ತಾ `ಜೋಕರ್ಸ್ ಆಫ್ ಕರ್ನಾಟಕ’ ಎನಿಸಿಕೊಂಡಿದ್ದಾರೆ.
ಇನ್ನೂ ಮುಂದುವರೆದು ಈ ವಿಧೇಯಕದ ಉದ್ದೇಶ `ಯಾವುದೇ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸಲು ಬದುಕಿರುವ ಅಥವಾ ಮೃತರ ಬಗ್ಗೆ, ಅವರ ವರ್ಗ, ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ, ವೈರತ್ವದ ಅಥವಾ ದ್ವೇಷದ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದೊಂದಿಗೆ ಸರ್ವಜನಿಕವಾಗಿ, ಮೌಖಿಕ ಅಥವಾ ಲಿಖಿತ ರೂಪದ ಪದಗಳಲ್ಲಿ ಅಥವಾ ಸಂಕೇತಗಳ ಮೂಲಕ ಅಥವಾ ದೃಶ್ಯರೂಪಕಗಳ ಮೂಲಕ ಅಥವಾ ವಿದ್ಯುನ್ಮಾನ ಸಂವಹನಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಮಾಡಲಾದ ಯಾವುದೇ ಅಭಿವ್ಯಕ್ತಿಯನ್ನು ಒಳಗೊಳ್ಳುವುದು ದ್ವೇಷ ಭಾಷಣವಾಗಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷದ ನಾಯಕರಿಗೂ ಅನ್ವಯವಾಗುತ್ತದೆ. ಅಂದ ಮೇಲೆ ಬಿಜೆಪಿಗೇಕೆ ಆ ಪರಿ ಹೊಟ್ಟೆ ಉರಿ. ಅಥವಾ ಬಿಜೆಪಿ ನಾಯಕರಿಗಾಗುವ ಅನ್ಯಾಯವಾದರೂ ಏನು ?
ದೇಶ ಪ್ರೇಮದ ಪ್ರತಿರೂಪ ಎಂದು ಬಿಂಬಿಸಿಕೊಳ್ಳುವ ಬಿಜೆಪಿಯನ್ನು `ದ್ವೇಷ ಪ್ರೇಮಿ’ ಎಂದು ಕರೆಯಲು ಇಲ್ಲಿದೆ ಸಾಕ್ಷ್ಯಾಧಾರಗಳು. Centre for the Study of Organized Hate (ಸಿಎಸ್‍ಓಹೆಚ್) ಅಧ್ಯಯನದ ಪ್ರಕಾರ 2024ರ ಸಾಲಿನಲ್ಲಿ ದೇಶಾದ್ಯಂತ ದಾಖಲಾಗಿರುವ ದ್ವೇಷ ಭಾಷಣದ ಪ್ರಕರಣಗಳಲ್ಲಿ ಬಿಜೆಪಿ ಮತ್ತು ಇದರ ಅಂಗ ಸಂಸ್ಥೆಗಳಾದ ಸಂಘ ಪರಿಹಾರ ಸಿಂಹಪಾಲು ಹೊಂದಿದೆ. ಹಿಂದೂ ರಾಷ್ಟ್ರೀಯವಾದಿ ಚಳವಳಿಯ ಹೆಸರಿನಲ್ಲಿ 2023 ಸಾಲಿನಲ್ಲಿ ಬಿಜೆಪಿ ಮತ್ತು ಸಂಘ ಪರಿಹಾರದ ನಾಯಕರು ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿಕೊಂಡು 668 ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಇನ್ನು ಕಳೆದ ವರ್ಷ 2024ರಲ್ಲಿ 1,165 ದ್ವೇಷ ಬಿತ್ತುವ ಭಾಷಣ, ರ್ಯಾಲಿ, ಪ್ರತಿಭಟನೆಗಳು ದಾಖಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ದ್ವೇಷ ಬಿತ್ತುವ ಪ್ರಕರಣ ಶೇ. 74ರಷ್ಟು ಏರಿಕೆಯಾಗಿದೆ.

 ಸಿಎಸ್‍ಓಹೆಚ್ ವರದಿ ಮುಂದುವರೆದಂತೆ ದ್ವೇಷ ಭಾಷಣದ ಹತ್ತು ಮಂದಿ ನಾಯಕರ ಹೆಸರುಗಳನ್ನೂ ಬಹಿರಂಗ ಪಡಿಸಿದ್ದು, ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 86 ದ್ವೇಷಕಾರರ ಭಾಷಣ ಮಾಡಿದ್ದರೆ, ಇವರ ನಂತರ ಪ್ರಧಾನಿ ನರೇಂದ್ರ ಮೋದಿ 67, ಗೃಹ ಸಚಿವ ಅಮಿತ್ ಷಾ ಅವರು 58, ಅಸ್ಸಾಂನ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮ 36, ಸುದರ್ಶನ್ ನ್ಯೂಸ್ ಸಂಸ್ಥೆಯ ಮುಖ್ಯಸ್ಥ 36, ತೆಲಂಗಾಣ ರಾಜ್ಯದ ಬಿಜೆಪಿ ಶಾಸಕ ಟಿ.ರಾಜ ಸಿಂಗ್ 32, ಅಂತಾರಾಷ್ಟ್ರೀಯ ಹಿಂದೂ ಪರಿಷತ್‍ನ ಅಧ್ಯಕ್ಷ ಪ್ರವೀಣ್ ತೊಗಾಡಿಯಾ 31, ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ 29, ಕಮಲ್ ಹಿಂದೂಸ್ತಾನಿ 23 ಮತ್ತು ಹಿಂದೂ ರಾಷ್ಟ್ರೀಯ ಸೇನೆಯ ಮುಖ್ಯಸ್ಥ ಧನಂಜಯ್ ದೇಸಾಯಿ ಅವರು 18 ದ್ವೇಷ ಭಾಷಣವನ್ನು ಮಾಡಿದ್ದಾರೆ ಎಂಬ ಅಂಕಿ ಅಂಶ ಸಹಿತ ಸಿಎಸ್‍ಓಹೆಚ್ ಸಂಸ್ಥೆ ತಿಳಿಸಿದೆ.

ಬಿಜೆಪಿಯ ರಾಷ್ಟ್ರೀಯ ನಾಯಕರು, ಆರ್‍ಎಸ್‍ಎಸ್, ಬಜರಂಗದಳ ಮತ್ತು ಹಿಂದೂ ಸಂಘಟನೆಗಳ ಮುಖ್ಯಸ್ಥರು ದ್ವೇಷ ಭಾಷಣದ ವಾರಸುದಾರರಾಗಿದ್ದಾರೆ. ಅಲ್ಲದೆ, ಬಹಿರಂಗ ಸಭೆ, ಸಮಾರಂಭ ಮಾತ್ರವಲ್ಲದೆ ಸಮಾಜಿಕ ಮಾಧ್ಯಮದ ವೇದಿಕೆಗಳಾದ ಫೇಸ್‍ಬುಕ್, ಇಸ್ಟಾಗ್ರಾಂ, ವಾಟ್ಸ್ ಅಪ್, ಯು-ಟೂಬ್, ಟೆಲಿಗ್ರಾಮ್, ಟ್ವಿಟರ್, ಎಕ್ಸ್ ಅಕೌಂಟ್‍ಗಳ ಮೂಲಕ ತೀವ್ರಗಾಮಿ ಸಿದ್ಧಾಂತವನ್ನು ಪ್ರಸಾರ ಮಾಡಲಾಗಿದೆ. ಕಳೆದ ವರ್ಷ ದಾಖಲಾಗಿರುವ 1165 ದ್ವೇಷ ಬಿತ್ತುವ ಪ್ರಕರಣದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರನ್ನು ಗುರಿಯಾಗಿಸಿಕೊಂಡು 995 ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ವಿಚಿತ್ರವೆಂದರೆ, 495 ವಿಡಿಯೋಗಳು ಫೇಸ್‍ಬುಕ್‍ನಲ್ಲಿ ಹಾಗೂ 211 ವಿಡಿಯೋಗಳನ್ನು ಯು-ಕ್ಯೂಬ್‍ನಲ್ಲಿ ಪ್ರಸಾರ ಮಾಡಲಾಗಿದೆ. ದುರದೃಷ್ಟ ಸಂಗತಿಯೆಂದರೆ, ಬಹುತೇಕ ವಿಡಿಯೋಗಳು ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪ್ರಸಾರ ಮಾಡಲಾಗಿದ್ದು ತದನಂತರದಲ್ಲಿ ಕ್ರೈಸ್ತ ಸಮುದಾಯವನ್ನು ಟಾರ್ಗೆಟ್ ಮಾಡಲಾಗಿದೆ. ಅಂದರೆ 1165 ದ್ವೇಷ ಭಾಷಣಗಳಲ್ಲಿ 1050 ಮುಸ್ಲಿಂ ವಿರೋಧಿ ಭಾಷಣ, 18 ಕ್ರೈಸ್ತ ವಿರೋಧಿ ಭಾಷಣ ಮತ್ತು 97 ಮುಸ್ಲಿಂ-ಕ್ರೈಸ್ತ ವಿರೋಧಿ ಭಾಷಣಗಳಾಗಿವೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಆಡಳಿತ ಇರುವ ರಾಜ್ಯಗಳಲ್ಲೇ ದ್ವೇಷ ಭಾಷಣ ಪ್ರಕರಣಗಳು ಹೆಚ್ಚು ದಾಖಲಾಗಿದೆ. ಉತ್ತರ ಪ್ರದೇಶ (242), ಮಹಾರಾಷ್ಟ್ರ (210) ಮತ್ತು ಮಧ್ಯಪ್ರದೇಶ (98) ದಾಖಲಾಗಿದೆ. ಇನ್ನೂ ಆಳವಾಗಿ ಹೇಳುವುದಾದರೆ, ಬಿಜೆಪಿ 340, ವಿಶ್ವ ಹಿಂದೂ ಪರಿಷತ್ 279, ಅಂತಾರಾಷ್ಟ್ರೀಯ ಹಿಂದೂ ಪರಿಷತ್ 85, ಸಕಲ್ ಹಿಂದೂ ಸಮಾಜ್ 56, ಹಿಂದೂ ರಾಷ್ಟ್ರ ಸೇನೆ 19, ಹಿಂದೂ ಜನಜಾಗೃತಿ ಸಮಿತಿ 17, ಹಿಂದೂ ಜಾಗರಣ್ ಮಂಚ್ 7 , ಗೋವು ರಕ್ಷಕ ದಳ 7, ದುರ್ಗ ವಾಹಿನಿ 5 ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಸಿಎಸ್‍ಓಹೆಚ್ ವರದಿಗಳು ಹೇಳಿವೆ.

ಈಗ ಹೇಳಿ, ಕರ್ನಾಟಕದಲ್ಲಿ ರಾಜ್ಯ ಸರಕಾರ ಜಾರಿಗೆ ತರುತ್ತಿರುವ `ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025′ ಅನ್ನು ಬಿಜೆಪಿ ವಿರೋಧಿಸಲು ಕಾರಣ ಸ್ಪಷ್ಟವಾಗಿದೆ. ಇವರಿಗೆ ಮುಸ್ಲಿಂ ಮತ್ತು ಕ್ರೈಸ್ತರನ್ನು ದ್ವೇಷಿಸದ ಹೊರತು ರಾಜಕೀಯ ಅಸ್ಥಿತ್ವವೇ ಇಲ್ಲ. `ಬಾಯಲ್ಲಿ ದೇಶ, ಮನದಲ್ಲಿ ದ್ವೇಷ’ ಇಟ್ಟುಕೊಂಡಿರುವ ಬಿಜೆಪಿ ತನ್ನ ರಾಜಕೀಯ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಹಿಂದೂ ಸಮಾಜವನ್ನು ಅದರ ಶ್ರೇಷ್ಠತೆಯ ಮೇಲೆ ಸಂಘಟಿಸುವಲ್ಲಿ ವಿಫಲಗೊಂಡಿದೆ. ಬದಲಿಗೆ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಅನ್ಯ ಧರ್ಮಗಳಾದ ಮುಸ್ಲಿ ಮತ್ತು ಕ್ರೈಸ್ತರನ್ನು ದ್ವೇಷಿಸುವ ಮೂಲಕ, ಆ ಧರ್ಮಗಳು ಹಿಂದೂ ದ್ವೇಷಿಗಳು, ಹೊರಗಿನವರು, ಭಾರತದ ಶತ್ರುಗಳು, ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಬಿಂಬಿಸುತ್ತಲೇ ತನ್ನ ರಾಜಕೀಯ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಆ ಕಾರಣದಿಂದಲೇ ಬಿಜೆಪಿ ಸದರಿ ಮಸೂದೆಯನ್ನು ವಿರೋಧಿಸುತ್ತಿದೆ. ನೈಜ ದೇಶ ಪ್ರೇಮಿಗಳು ಎಂದಿಗೂ ದ್ವೇಷವನ್ನು ಒಪ್ಪುವುದಿಲ್ಲ ಮತ್ತು ಈ ನೆಲ ದ್ವೇಷಕ್ಕೆ ಒಗ್ಗುವುದಿಲ್ಲ ಎಂಬ ಸತ್ಯ ಜನರಿಗೆ ಅರಿವಾಗುವವರೆಗೂ ಬಿಜೆಪಿ ನಾಯಕರು `ಬಾಯಲ್ಲಿ ದೇಶ -ಮನದಲ್ಲಿ ದ್ವೇಷ’ದ ಮಂತ್ರ ಜಪಿಸುವುದು ಆ ಪಕ್ಷಕ್ಕೆ ಅನಿವಾರ್ಯವಾಗಲಿದೆ ಎಂದು ಹೇಳುತ್ತಾ `ಕಾಲಮಾನ’ಕ್ಕೆ ವಿರಾಮ ಹೇಳುತ್ತೇನೆ.

Call Now Button