ಗದಗ: ಕ್ರಾಂತಿಯೋಗಿ ಬಸವಣ್ಣನವರು ʻಇವನ್ಯಾರವ ಎನ್ನದಿರಿ, ಇವ ನಮ್ಮವ್ವ ಎನ್ನಿರಯ್ಯʼ ಎಂದು 800 ವರ್ಷಗಳ ಹಿಂದೆಯೆ ಹೇಳಿದ್ದಾರೆ. ಈ ನಾಡಿಗೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ, ಶೇ. 76ರಷ್ಟು ಮಂದಿ ಸಾಕ್ಷರತೆ ಸಾಧಿಸಿದ್ದರೂ ಜಾತಿಯತೆ ಹೋಗಿಲ್ಲ. ಸುಶಿಕ್ಷಿತರಲ್ಲೇ ಜಾತಿಯತೆಯನ್ನು ಹೆಚ್ಚಾಗಿ ಕಾಣುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಚಂದನ ಎಜುಕೇಶನ್ ಸೊಸೈಟಿ ಲಕ್ಷ್ಮೇಶ್ವರ ಇವರ ವತಿಯಿಂದ ಆಯೋಜಿಸಲಾಗಿದ್ದ ಭಾರತ ರತ್ನ ಪ್ರೋ ಸಿ ಎನ್ ಆರ್ ರಾವ್ 10 ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ-2025 ಹಾಗೂ ಬಿ.ಎಸ್. ಪಾಟೀಲ ಇವರಿಗೆ ಈ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಕೂಡ ಮೌಢ್ಯಗಳನ್ನು ಆಚರಿಸಲಾಗುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದೆವು. ಭ್ರಾತೃತ್ವ, ಸ್ವಾತಂತ್ರ್ಯ , ಸಮಾನತೆಗಳನ್ನು ಸಂವಿಧಾನ ತಿಳಿಸಿದ್ದು, ಇದು ಅಕ್ಷರಶ: ಜಾರಿಯಾಗದೇ, ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅಗತ್ಯ ಎಂದರು.
ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾಗಿಲ್ಲ :

ಎಲ್ಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಪಟ್ಟಭದ್ರಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ತನ್ನ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ, ಯಾವುದೇ ವರ್ಗದವರೂ ಕೂಡ ಸಾಧನೆಗಳನ್ನು ಮಾಡಬಹುದಾಗಿದೆ. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳನ್ನು ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ ಎಂದರು.
ಪ್ರಾಮಾಣಿಕ ಅಧಿಕಾರಿ ಬಿ.ಎಸ್.ಪಾಟೀಲ :
ಪ್ರಧಾನ ಕಾರ್ಯದರ್ಶಿಗಳಾಗಿದ್ದ ಬಿ.ಎಸ್.ಪಾಟೀಲರೊಂದಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನೆರವು ನೀಡುತ್ತಿದ್ದರು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ರೈತ ಕುಟುಂಬದಿಂದ ಬಂದು ವಿದ್ಯಾಭ್ಯಾಸ ಮಾಡಿ ಸೈನ್ಯ ಸೇರಿ ನಂತರ ಐ.ಎ.ಎಸ್ ಅಧಿಕಾರಿಯಾದವರು. ಅವರಲ್ಲಿ ಇಚ್ಚಾಶಕ್ತಿ ಇದ್ದದ್ದರಿಂದ ಅಪಘಾತವಾಗಿದ್ದರೂ ಐಎಎಸ್ ಉತ್ತೀರ್ಣರಾಗಲು ಸಾಧ್ಯವಾಯಿತು. ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಹಾಜರಿದ್ದರು.


