ದಾವಣಗೆರೆ: ಭಾನುವಾರ ನಿಧನರಾದ ಕರ್ನಾಟಕದ ರಾಜಕೀಯ ಭೀಷ್ಮ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರೂ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ, ನಾಡಿನ ಹಿರಿಯ ರಾಜಕಾರಣಿಗಳ ಸಮ್ಮುಖದಲ್ಲಿ, ಸಾವಿರಾರು ಅಭಿಮಾನಿಗಳ ಕಣ್ಣೀರಿನ ಧಾರೆಯ ನಡುವೆ, ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು.
ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಕ್ರಿಯಾಸಮಾಧಿ ಮಾಡಲಾಯಿತು. ಮಣ್ಣಿನ ಬದಲಿಗೆ ವಿಭೂತಿ ಗಟ್ಟಿಗಳೊಂದಿಗೆ ಪಂಚಪೀಠದ ಸ್ವಾಮೀಜಿಗಳು ಸಮ್ಮುಖದಲ್ಲಿ ಶಾಮನೂರು ಪುತ್ರ ಎಸ್.ಎಸ್ ಮಲ್ಲಿಕಾರ್ಜುನ ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದರು. ಅಂತ್ಯಕ್ರಿಯೆಯ ವೇಳೆ ಶಾಮನೂರರ ಪಾರ್ಥಿವ ಶರೀರಕ್ಕೆ ಪೊಲೀಸರು ತ್ರಿವರ್ಣ ಧ್ವಜ ಹೊದಿಸಿ ಗೌರವ ಸೂಚಿಸಿದರು. ಇದಾದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ತ್ರಿವರ್ಣಧ್ವಜವನ್ನು ಶಾಮನೂರು ಕುಟುಂಬಕ್ಕೆ ನೀಡಿದರು. ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಬಳಿಕ ವಾದ್ಯವಂದನೆ ಅರ್ಪಿಸಿ, ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ ರವಿ, ವಿವಿಧ ಮಠಾಧೀಶರು ಹಾಗೂ ಚರ್ಚ್ ಪಾದ್ರಿಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ದಾವಣೆಗೆರೆ ನಗರದಲ್ಲಿ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡಿ ಗೌರವ ಸಲ್ಲಿಸಲಾಯಿತು.
ಅಂತಿಮ ಯಾತ್ರೆ: ಇದಕ್ಕು ಮುನ್ನ ಬೆಳಗ್ಗೆ ಶಾಮನೂರರ ಪಾರ್ಥಿವ ಶರೀರವನ್ನು ನಗರದ ಎಂಸಿಸಿ ಬಡಾವಣೆಯ ಅವರ ನಿವಾಸದಲ್ಲಿ ಇರಿಸಲಾಗಿತ್ತು. ಕುಟುಂಬದ ಸದಸ್ಯರು ಪೂಜಾ ವಿಧಿವಿದಾನಗಳನ್ನು ನೆರವೇರಿಸಿದರು. ನಂತರ ಮಧ್ಯಾಹ್ನ ೧೨.೨೦ಕ್ಕೆ ಪಾರ್ಥಿವ ಶರೀರವನ್ನು ಮೆರವಣಿಗೆಯ ೧.೩೦ಕ್ಕೆ ಹೈಸ್ಕೂಲ್ ಮೈದಾನಕ್ಕೆ ತರಲಾಯಿತು. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಮಧ್ಯಾಹ್ನ ೨.೪೫ಕ್ಕೆ ಆರಂಭಗೊಂಡ ಅಂತಿಮ ಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ರಸ್ತೆಯ ಇಕ್ಕೆಲೆಗಳಲ್ಲಿ ನಿಂತಿದ್ದ ಸಹಸ್ರಾರು ಅಭಿಮಾನಿಗಳು ಕಂಬನಿ ಮಿಡಿದರು. ನಂತರ ಸಂಜೆ ೪.೩೦ಕ್ಕೆ ಕಲ್ಲೇಶ್ವರ ಮಿಲ್ ಆವರಣಕ್ಕೆ ಪಾರ್ಥಿವ ಶರೀರವನ್ನು ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
1931ರ ಜೂನ್ 16ರಂದು ದಾವಣಗೆರೆಯಲ್ಲಿ ಜನಿಸಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದು, ಅವರು ಭಾರತದಲ್ಲಿ ರಾಜ್ಯ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು. ಶಾಮನೂರು ಶಿವಶಂಕರಪ್ಪ ಅವರು ವಿಧಾನಸಭೆಗೆ ಆರು ಸಲ ಶಾಸಕರಾಗಿ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. 1997ರಲ್ಲಿ ದಾವಣಗೆರೆ ಲೋಕಸಭೆ ಮಧ್ಯಂತರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಐದು ದೇಶಕದ ರಾಜಕೀಯ ಜೀವನದಲ್ಲಿ ಒಂದು ಬಾರಿ ಸೋಲನ್ನಪ್ಪಿದ್ದರು. 1994, 2004, 2008, 2013, 2018, 2023ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.


