Online News in ಕನ್ನಡ

ಭಾರತವನ್ನು ಬದಲಿಸುತ್ತೇವೆ ಎಂದವರು, ಕೇವಲ ಹೆಸರುಗಳನ್ನು ಬದಲಿಸಿದರು…! ಪತ್ರಕರ್ತ ಕೆ.ದೀಪಕ್‌ ಅವರಿಂದ ಸಂಪಾದಕೀಯ…

ಕಾಲಮಾನ-10

ದ್ಯ ದೇಶದಲ್ಲಿ ನರೇಗಾ ಸ್ವರೂಪ ಬದಲು ಮಸೂದೆ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2005ರಲ್ಲಿ ಜಾರಿಗೆ ತಂದಿದ್ದ `ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಹೆಸರನ್ನೂ ಸೇರಿದಂತೆ ಅನೇಕ ಮಾನದಂಡಗಳನ್ನು ಬದಲಾವಣೆಗಳನ್ನು ತರಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ. ಮಹಾತ್ಮ ಗಾಂಧೀಜಿ ಹೆಸರಿನ ಬದಲು `ಜಿ ರಾಮ್ ಜಿ’ ಯೋಜನೆ ಎಂದು ಹೆಸರಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದು ಕೇವಲ ಹೆಸರು ಬದಲಾವಣೆ ಮಾತ್ರವಲ್ಲ ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ನರೇಗಾ ಬದಲಿಗೆ `ವಿಕಸಿತ ಭಾರತ’-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ-2025 ಅನ್ನು ಕೇಂದ್ರ ಸರಕಾರ ಮಂಡಿಸಿದೆ.
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ 11 ವರ್ಷಗಳ ಆಳ್ವಿಕೆಯಲ್ಲಿ ಈ ರೀತಿ ಯೋಜನೆಗಳ ಹೆಸರನ್ನು ಮತ್ತು ಸ್ವರೂಪವನ್ನು ಬದಲಿಸುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ ಯುಪಿಎ-2 ಸರಕಾರದ ಅಂತ್ಯದ ವೇಳೆಗೆ `ಸಬ್-ಕಾ-ಸಾತ್, ಸಬ್-ಕಾ-ವಿಕಾಸ್’ (ಎಲ್ಲರ ಜತೆ-ಎಲ್ಲರ ವಿಕಾಸ) ಘೋಷಣೆಯೊಂದಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರವು ಇದುವರೆಗೆ ಕಾಂಗ್ರೆಸ್ ಸರಕಾರವು ಕಳೆದ 50 ವರ್ಷಗಳಲ್ಲಿ ಜಾರಿಗೆ ತಂದ ಸುಮಾರು 32 ರಾಷ್ಟ್ರೀಯ ಯೋಜನೆಗಳು ಮತ್ತು ಕಾರ್ಯಕ್ರಮಗಳ ಹೆಸರನ್ನು ಬದಲಾಯಿಸಿದೆ. ಕೇವಲ ಹೆಸರನ್ನು ಮಾತ್ರವಲ್ಲ, ಈ ಯೋಜನೆಗಳ ಮೂಲ ಆಶಯ ಮತ್ತು ಉದ್ದೇಶವನ್ನೂ ಬದಲಿಸಿರುವುದು ದುರದೃಷ್ಟಕರ. ಜತೆಗೆ ಕೇವಲ ಹೆಸರನ್ನು ಬದಲಿಸಿ ತಮ್ಮದೇ ಯೋಜನೆ ಎಂಬಂತೆ ಸಾವಿರಾರು ಕೋಟಿ ರೂ.ಗಳನ್ನು ಜಾಹೀರಾತುಗಳಿಗೆ ಖರ್ಚು ಮಾಡಿರುವುದು ಈ ದೇಶದ ಜನರ ದುರಂತ.
ಈಗ ನರೇಗಾ ಯೋಜನೆಯ ಸ್ವರೂಪವನ್ನು ಬದಲಿಸುವ ನೆಪದಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಹಾಕುತ್ತಿರುವುದು ಸೇಡು ಮತ್ತು ರಾಷ್ಟ್ರದ್ರೋಹದ ಕ್ರಮ ಎಂದು ಪ್ರತಿಪಕ್ಷಗಳು ದೂರಿದ್ದರೆ, ಗಾಂಧೀಜಿ ಅವರು ಕೊನೆಯುಸಿರೆಳೆಯುವಾಗ `ಹೇ ರಾಮ್’ ಎಂದು ಉಚ್ಛರಿಸಿ ಉಸಿರುಬಿಟ್ಟಿದ್ದರು, ಅವರ ಇಚ್ಛೆಯ ನಾಮವನ್ನೇ ಯೋಜನೆಗೆ ಇಟ್ಟಿದ್ದೇವೆ’ ಎಂದು ಹೇಳುವ ಮೂಲಕ ಜಾಣ ಸಮರ್ಥನೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಆದರೆ, ಉಸಿರು ತೆಗೆದವರು ಯಾರು ಎಂದು ಇಡೀ ಜಗತ್ತಿಗೆ ತಿಳಿದಿರುವಾಗ ಹೆಸರು ತೆಗೆಯುವುದರ ಹಿಂದಿನ ಮರ್ಮ ಏನು ಎಂದು ತಿಳಿಯದಷ್ಟು ಭಾರತೀಯರು ಅಜ್ಞಾನಿಗಳಲ್ಲ ಎಂಬ ಸತ್ಯ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ. `ಅಂದು ಜೀವ ತೆಗೆದವರು, ಇಂದು ಹೆಸರು ತೆಗೆಯುತ್ತಿದ್ದಾರೆ’ ಅಷ್ಟೆ.

ವಿಕಸಿತ ಭಾರತಕ್ಕೆ ʻಜಿ ರಾಮ್‌ ಜಿʼ ಹೆಸರಿನಲ್ಲಿ ನರೇಗಾ ಸ್ವರೂಪ ಮತ್ತು ಮಹಾತ್ಮ ಗಾಂಧೀಜಿ ಹೆಸರನ್ನು ಬದಲಿಸುವ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರಕಾರ ಮುಂದಾಗಿದೆ. ʻಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌ʼ ಘೋಷವಾಕ್ಯದೊಂದಿಗೆ ೨೦೧೪ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರಕಾರವು ಈ ೧೧ ವರ್ಷಗಳಲ್ಲಿ ಕಳೆದ ೫೦ ವರ್ಷಗಳಲ್ಲಿ ಕಾಂಗ್ರೆಸ್‌ ಜಾರಿಗೆ ತಂದಿರುವ ಯೋಜನೆಗಳ ಪೈಕಿ ೩೨ಕ್ಕೂ ಹೆಚ್ಚು ಯೋಜನೆಗಳು ಮತ್ತು ಕಾರ್ಯಕ್ರಮಗಳ ಹೆಸರನ್ನು ಬದಲಿಸಿದೆ. ಬದಲಾಗುತ್ತಿದೆ ಭಾರತ ಎಂದರೆ ಇದೇನಾ ?

ಬಿಜೆಪಿ ಬದಲಿಸಿದ ಯೋಜನೆಗಳ ಹೆಸರು:
ಅಂದಿನ ಪ್ರಧಾನ ಮಂತ್ರಿ, ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನೇತೃತ್ವದ ಯುಪಿಎ-2 2013ರಲ್ಲಿ ಜಾರಿಗೆ ತಂದ ಎಲ್‍ಪಿಜಿ ನೇರ ಹಣ ವರ್ಗಾವಣೆ ಯೋಜನೆಯನ್ನು ಎನ್‍ಡಿಎ ಸರಕಾರ ಪಹಲ್ ಎಂದೂ, `ನಿರ್ಮಲ್ ಭಾರತ್ ಅಭಿಯಾನ್’ ಯೋಜನೆಯನ್ನು `ಸ್ವಚ್ಛ್ ಭಾರತ್ ಮಿಷನ್’ ಎಂದೂ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯನ್ನು ದೀನದಯಾಳು ಅಂತ್ಯೋದಯ ಯೋಜನೆ ಎಂದೂ ಬದಲಿಸಲಾಗಿದೆ. ಇದರಲ್ಲಿ `ಸ್ವಚ್ಛ ಭಾರತ್ ಮಿಷನ್’ ಯೋಜನೆಗೆ ಗಾಂಧೀಜಿ ಅವರ ಕನ್ನಡಕವನ್ನೇ ಬ್ರಾಂಡ್ ಮಾಡಿ ಕನ್ನಡದೊಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿಟ್ಟು ನೂರಾರು ಕೋಟಿ ರೂಪಾಯಿ ಹಣವನ್ನು ಜಾಹೀರಾತುಗಳಿಗೆ ಬಳಸಿ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಯೋಜನೆ ಎಂಬಂತೆ ಪ್ರಚಾರ ಮಾಡಲಾಯಿತು.
ಇದೇ ಯುಪಿಎ-2 ಸರಕಾರದಲ್ಲಿ 2012ರಂದು ಜಾರಿಗೆ ತಂದ ಪ್ರಧಾನ ಮಂತ್ರಿ ಸಂಶೋಧನಾ ಶಿಷ್ಯವೇತನ ಯೋಜನೆಯನ್ನ ಈಗ ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆಯನ್ನಾಗಿ, 2011ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಪ್ಟಿಕಲ್ಸ್ ಫೈರ್ ನೆಟ್‍ವರ್ಕ್ ಯೋಜನೆಯನ್ನು ಭಾರತ್ ನೆಟ್ ಎಂದು ಬದಲಿಸಿ, ಕೌಶಲ್ಯ ಅಭಿವೃದ್ಧಿ ಮತ್ತು ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಯುಪಿಎ ಸರಕಾರ ಜಾರಿಗೆ ತಂದ ರಾಷ್ಟ್ರೀಯ ಉತ್ಪಾದನಾ ನೀತಿಯನ್ನು `ಮೇಕ್ ಇನ್ ಇಂಡಿಯಾ’ ಎಂದು ಬ್ರಾಂಡ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಸರಕಾರದ ಹೊಸ ಯೋಜನೆಗಳು ಎಂಬಂತೆ ಬಿಂಬಿಸಿದ್ದಾರೆ. 2010ರಲ್ಲಿ ಜಾರಿಗೆ ಬಂದ ಇಂದಿರಾ ಗಾಂಧಿ ಮಾತೃತ್ವ ಸಹಯೋಗ್ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಎಂದು ಬದಲಿಸಲಾಯಿತು.
ಇದೇ ವರ್ಷ 2010ರಂದು ಆರಂಭಕಂಡ ಸ್ವಾವಲಂಬನ್ ಯೋಜನೆಯನ್ನು ಅಟಲ್ ಪೆಷನ್ ಯೋಜನೆಯನ್ನಾಗಿ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು `ಸ್ಕಿಲ್ ಇಂಡಿಯಾ’ ಎಂದೂ, ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್‍ಪಿಜಿ ಯೋಜನೆಯನ್ನು ಪ್ರಧಾನ ಮಂತ್ರಿ ಉಜ್ವನ್ ಯೋಜನೆ ಎಂದೂ, ಪರಿಷ್ಕøತ ರಾಷ್ಟ್ರೀಯ ಕೃಷಿ ವಿಮೆ ಯೋಜನೆಯನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎಂದು ನಾಮಕರಣ ಮಾಡಲಾಗಿದೆ. ಇನ್ನು ಯುಪಿಎ-1 ಸರಕಾರದಲ್ಲಿ ಜಾರಿಗೆ ಬಂದ ರಾಜೀವ್ ಅವಾಜ್ ಯೋಜನೆಯನ್ನು ಸರ್ದಾರ್ ಪಟೇಲ್ ನ್ಯಾಷನಲ್ ಮಿಷನ್ ಫಾರ್ ಅರ್ಬನ್ ಹೌಸಿಂಗ್ ಎಂದೂ, ರಾಷ್ಟ್ರೀಯ ಹೆಣ್ಣು ಮಕ್ಕಳ ಕಾರ್ಯಕ್ರಮವನ್ನು `ಬೇಟಿ ಬಚಾವೋ-ಬೇಟಿ ಪಡಾವೋ’ ಎಂದೂ, ಜನ ಔಷಧಿ ಯೋಜನೆಯನ್ನು ಪ್ರಧಾನಮಂತ್ರಿ ಜನ್ ಔಷಧಿ ಯೋಜನೆ ಎಂದೂ ಬದಲಿಸಿ ಎಲ್ಲ ಮೆಡಿಕಲ್ ಸ್ಟೋರ್‍ಗಳ ಮುಂದೆ ಪ್ರಧಾನಿ ಮೋದಿ ಅವರ ಭಾವಚಿತ್ರ ಮುದ್ರಿಸಲಾಯಿತು.

2007ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಇತರೆ ಕಾರ್ಯಕ್ರಮಗಳನ್ನು `ಪರಂಪರಾಗತ್ ಕೃಷಿ ವಿಕಾಸ್ ಯೋಜನೆ’ ಎಂದು, ಆಮ್ ಆದ್ಮಿ ಬಿಮಾ ಯೋಜನೆಯನ್ನು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂದೂ, 2006ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಇ-ಗೌರ್ನೆನ್ಸ್ ಪ್ಲಾನ್ ಯೋಜನೆಯನ್ನು `ಡಿಜಿಟಲ್ ಇಂಡಿಯಾ’ ಎಂದೂ, ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ತೀಕರಣ ಯೋಜನೆಯನ್ನು ದೀನ ದಯಾಳ್ ಉಪದ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಎಂದೂ, ಪಾರಂಪರಿಕ ಪ್ರದೇಶಗಳ ಅಭಿವೃದ್ಧಿಗೆ 2005ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದ ಜೆಎನ್-ನರ್ಮ್ ಯೋಜನೆಯನ್ನು ಹೆಚ್‍ಆರ್‍ಐಡಿಎವೈ (ಹೃದಯ್) ಎಂದೂ, ನ್ಯೂ ಡೀಲ್ ಫಾರ್ ರೂರಲ್ ಇಂಡಿಯಾ ಕಾರ್ಯಕ್ರಮದ ಹೆಸರನ್ನು `ಗ್ರಾಮ್ ಉದಯ್ ಸೆ ಭಾರತ್ ಉದಯ್’ ಎಂದು ಹೆಸರು ಬದಲಾವಣೆಯಾಗಿದೆ.
1985ರಲ್ಲಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಯೂನಿವರ್ಸಲ್ ಆಫ್ ಇಮ್ಯೂನಿಜೇಷನ್ ಪ್ರೋಗ್ರಾಂ ಅನ್ನು `ಮಿಷನ್ ಇಂದ್ರ ಧನುಷ್’ ಎಂದೂ, ಬೆಳೆ ವಿಮೆ ಯೋಜನೆಯನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎಂದೂ, ಇಂದಿರಾ ಅವಾಜ್ ಯೋಜನೆಯನ್ನು ಪ್ರಧಾನಮಂತ್ರಿ ಗ್ರಾಮೀಣ ಅವಾಜ್ ಯೋಜನೆ ಎಂದು ನಾಮಕರಣ ಮಾಡಿ ಹಳೇ ಯೋಜನೆಗಳಿಗೆ ಹೊಸ ಲೇಬಲ್ ಹಾಕಿ, ಜಾಹಿರಾತುಗಳ ಮೂಲಕ ಪ್ರಚಾರ ಪಡೆಯಲಾಗಿದೆ. ಇವು ಕೆಲವೇ ಕೆಲವು ಪ್ರಮುಖ ಯೋಜನೆಗಳ ಅಂಕಿ ಅಂಶ. ಇನ್ನು ಹತ್ತಾರು ಸಣ್ಣ-ಪುಟ್ಟ ಯೋಜನೆಗಳ ಹೆಸರು ಬದಲಿಸಿರುವ ಉದಾಹರಣೆಗಳು ಬೇಕಾದಷ್ಟಿದೆ.
ಇದೀಗ ಬಿಜೆಪಿಯು 2014ರ ಲೋಕಸಭಾ ಚುನಾವಣೆಯಲ್ಲಿ `ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂದೂ, ಎರಡನೇ ಬಾರಿಗೆ 2019ರ ಪಾರ್ಲಿಮೆಂಟ್ ಚುನಾವಣೆಯಲ್ಲಿ `ಸಂಕಲ್ಪತ್ ಭಾರತ್’ ಎಂದೂ, 2024ರಲ್ಲಿ `ಪಿರ್ ಏಕ್ ಬಾರ್ ಮೋದಿ ಸರಕಾರ್’ ಎಂಬ ಘೋಷವಾಕ್ಯದ ಮೇಲೆ ಹನ್ನೊಂದು ವರ್ಷಗಳಿಂದ ಆಡಳಿತದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರಕರ ಕನಿಷ್ಠ ಹನ್ನೊಂದು ಹೊಸ ಯೋಜನೆಗಳನ್ನಾದರೂ ದೇಶಕ್ಕೆ ನೀಡಬೇಕಿತ್ತು. ಇದೀಗ ನರೇಗಾ ಯೋಜನೆಯ ಸ್ವರೂಪದಲ್ಲಿ ಒಂದೆರಡು ಮೂರು ಅಂಶಗಳನ್ನು ಬದಲಿಸಿ, ಈವರೆಗೆ ಸದರಿ ಯೋಜನೆಯ ಅನುದಾನವನ್ನು ಸಂಪೂರ್ಣವಾಗಿ ಕೇಂದ್ರ ಸರಕಾರವೇ ಭರಿಸುತ್ತಿದ್ದ ಬದಲಿಗೆ ಕೇಂದ್ರ ಶೇ.60ರಷ್ಟು ಮತ್ತು ರಾಜ್ಯ ಸರಕಾರಗಳು ಶೇ.40ರಷ್ಟು ಅನುದಾನದ ಪಾಲನ್ನು ನಿಗದಿಪಡಿಸಲು ಮುಂದಾಗಿ ಪೂರ್ಣ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ನುಣುಕಿಕೊಳ್ಳಲು ಯತ್ನಿಸುತ್ತಿದೆ.
ಅಂದು ಕಪ್ಪು ಹಣ ವಾಪಸ್ಸು, ಉದ್ಯೋಗ ಭರವಸೆ, ಭ್ರಷ್ಟಾಚಾರ ಮುಕ್ತ ಆಡಳಿತ, ಎಲ್ಲರೊಂದಿಗೆ ಎಲ್ಲರ ವಿಕಾಸ ಎಂದೆಲ್ಲ ಭ್ರಮೆಗಳನ್ನು ಹುಟ್ಟಿಸಿ ಇದೀಗ ದೇಶದಲ್ಲಿ 2 ಲಕ್ಷ ಕೋಟಿ ರೂಪಾಯಿ ಸಾಲವನ್ನು ಭಾರತೀಯರ ಮೇಲೆ ಹೊರಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶ ನಡೆಸುವುದಕ್ಕಿಂತ್ತಲೂ ಚುನಾವಣೆಗಳನ್ನು ನಡೆಸುವಲ್ಲಿ ಮಗ್ನರಾಗಿದ್ದಾರೆ. ಅಮೇರಿಕಾ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಕಳವಳ ಹುಟ್ಟಿಸಿದೆ. ಈ ಎಲ್ಲ ಅಂಶಗಳನ್ನು ಮರೆಮಾಚಲು ಭಾರತೀಯರ ಭಾವನಾತ್ಮಕ ವಿಷಯಗಳನ್ನೇ ಸದಾ ಮುನ್ನೆಲೆಗೆ ತಂದು ಧಿಕ್ಕುತಪ್ಪಿಸಲಾಗುತ್ತಿದೆ. ಅಂದು ದೇಶವನ್ನೇ ಬದಲಿಸುತ್ತೇವೆ ಎಂದವರು ಈಗ ಹಳೇ ಯೋಜನೆಗಳು ಮತ್ತು ಕಾರ್ಯಕ್ರಮಗಳ ಹೆಸರಗಳನ್ನು ಮತ್ತು ಅದರ ಮೂಲ ಆಶಯಗಳನ್ನು ಬದಲಿಸಿದ್ದಾರೆ. ಭಾರತ ಬದಲಾಗುತ್ತಿದೆ ಎಂದರೆ ಇದೇನಾ ?

Call Now Button