ಮೈಸೂರು: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಪುನರಾರಂಭಕ್ಕೆ ಸರಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಅರಣ್ಯ ಭವನಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ರೆಸಾರ್ಟ್ ಮಾಲೀಕರು ಮತ್ತು ಹಣವಂತ್ತರಿಗೆ ಮಣಿದು ಸರಕಾರ ಅನುಮತಿ ನೀಡಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಬೆಳಗ್ಗೆ 11 ಗಂಟೆಯಲ್ಲಿ ನಗರದ ಅಶೋಕಾಪುರಂ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಮುಖ್ಯ ದ್ವಾರದ ಬಳಿಯೆ ತಡೆಯಲಾಯಿತು. ರೈತ ಮುಖಂಡ ಹಳ್ಳಿಕೆರೆ ಭಾಗ್ಯರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಡಂಚಿನ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.

ʻಕಾಡು ಪ್ರಾಣಿ ನೋಡಿ ಎಸಿಗಳಲ್ಲಿ ಮಲಗುವ ಜನʼ
ಪ್ರವಾಸಕ್ಕೆಂದು ಬಂದು ಮೋಜು, ಮಸ್ತಿಗೆ ಸಫಾರಿ ಮಾಡಿ ಪ್ರಾಣಿಗಳನ್ನು ನೋಡಿದ ಬಳಿಕ ಏಸಿ ರೂಂಗಳಲ್ಲಿ ಮಲಗುವ ಶ್ರೀಮಂತರಿಗೆ ಕಾಡಂಚಿನ ಜಮೀನುಗಳಲ್ಲಿ ದುಡಿಯುವ ರೈತರ ಕಷ್ವ ಅರ್ಥವಾಗುವುದಿಲ್ಲ. ಪ್ರತಿದಿನ ಕಾಡು ಪ್ರಾಣಿಗಳ ದಾಳಿಗೆ ಅದೆಷ್ಟೋ ರೈತರು ಪ್ರಾಣಿ ತ್ಯಾಗ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ. ಸಫಾರಿ ಮಾಡುವುದರಿಂದ ಕಾಡು ಪ್ರಾಣಿಗಳೂ ಊರಿನೊಳಗೆ ಬರುತ್ತಿವೆ ಎಂದು ರೈತ ಮುಖಂಡ ಹಳ್ಳಿಕೆರೆ ಭಾಗ್ಯರಾಜ್ ಪ್ರತಿಪಾದಿಸಿದ್ದಾರೆ.ಬೆಂಗಳೂರಿನಲ್ಲಿ ಕುಳಿತು ಆದೇಶ ಮಾಡುವ ಮಂತ್ರಿಗಳು ಕಾಡು ಕಾಯಲು ಬರಬೇಕು. ಇಲ್ಲ ರೈತರ ಮುಂದೆ ಬಂದು ಆದೇಶ ಮಾಡಲಿ ಎಂದು ಸವಾಲು ಹಾಕಿದರು. ರೈತರಿಂದ ಓಟು ಪಡೆದು ಅಧಿಕಾರಕ್ಕೆ ಬಂದ ಜನ ರೈತರ ಹಕ್ಕೊತ್ತಾಯಗಳಿಗೆ ಮನ್ನಣೆ ನೀಡದೆ ಶ್ರೀಮಂತರ ಆಮೀಷಕ್ಕೆ ಒಳಗಾಗುತ್ತಿದೆ ಎಂದು ಅಪಾದಿಸಿದರು. ಪ್ರತಿಭಟನೆಯ ಉದ್ದಕ್ಕೂ ಸರಕಾರದ ವಿರುದ್ಧ ಘೋಷಣೆಗಳೂ ಕೇಳಿಬಂದಿತು.

ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮ ರೆಸಾರ್ಟ್ಗಳಿಗೆ ಅನುಮತಿ ನೀಡಲಾಗಿದ್ದು, ಸಫಾರಿ ಬಂದ್ ಮಾಡಿದ್ದರಿಂದ ರೆಸಾರ್ಟ್ಗಳಿಗೆ ನಷ್ಟವಾಗಿದೆ ಎಂದು ಪ್ರತಿಪಾದಿಸಲಾಗಿತ್ತು. ಅಲ್ಲದೆ, ಕೆಲ ರೆಸಾರ್ಟ್ ಮಾಲೀಕರು ಪ್ರಾಯೋಜಕತ್ವದ ಪ್ರತಿಭಟನೆಗಳನ್ನು ನಡೆಸಿ ಸರಕಾರದ ಮೇಲೆ ಒತ್ತಡೆ ಹೇರಿದ್ದರು. ಆದರೆ, ರೈತರು ಮಾತ್ರ ಕಾಡು ಉಳಿಯಬೇಕು, ಕಾಡು ಪ್ರಾಣಿಗಳು ಗ್ರಾಮಗಳಿಗೆ ಬರದಂತೆ ತಡೆಗಟ್ಟಬೇಕಾದರೆ ಸಫಾರಿ ನಿಲ್ಲಿಸಬೇಕೆಂದು ಆಗ್ರಹಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು.
ಆದರೆ, ರಾಜ್ಯ ಸರಕಾರ ನಿನ್ನೆ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹಿಂದಿನದಕ್ಕಿಂತ್ತ ಶೇ. 50ರಷ್ಟು ಪ್ರಮಾಣದಲ್ಲಿ ಹಾಗೂ ಕಡಿಮೆ ಅವದಿಗೆ ಸಫಾರಿಯನ್ನು ಹಂತ ಹಂತವಾಗಿ ಪುನರಾರಂಭ ಮಾಡಲು ಅನುಮತಿ ನೀಡಿದೆ. ಇದನ್ನು ವಿರೋಧಿಸಿ ರೈತರು ಇಂದು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

