ಮೈಸೂರು: ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರ ವಿರುದ್ಧ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರಗತಿಪರರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜೆನ್ನಿ), ಪರಿವಾರದ ಕೇಂದ್ರ ಕಚೇರಿ ನಾಗ್ಪುರದಲ್ಲಿ ಯಾರು ಏನೇ ಮಾಡಿದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಇಲ್ಲಿ ಸರಿಯಾಗಿ ಕನ್ನಡ ಮಾತನಾಡಲು ಬಾರದವರು, ಕನ್ನಡ, ಕನ್ನಡ ಸಂಸ್ಕೃತಿ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿವಿಧ ನಾಯಕರು ಮಾತನಾಡಿ, ಬಾನು ಮುಷ್ತಾಕ್ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ದಸರಾ ನಾಡಹಬ್ಬ. ಸರ್ಕಾರ ನಡೆಸುವ ಹಬ್ಬ. ಈ ಸಾರ್ವಜನಿಕ ಆಚರಣೆಗೆ ಧರ್ಮದ ಕೆಸರು ಎರಚಿ ಕೇಸರೀಕರಣ ಮಾಡುವ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್ ಅವರು ಸಾಧ್ಯವಿದ್ದರೆ ಚಾಮುಂಡಿ ಬೆಟ್ಟ ಹತ್ತಲಿ ಎಂದು ಸವಾಲು ಹಾಕಿದ್ದಾರೆ. ಬೆಟ್ಟವನ್ನು ಇವರಿಗೆ ಯಾರು ಬರೆದುಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಪ್ರತಾಪ ಸಿಂಹ ಅವರು ಬಾನು ಮುಷ್ತಾಕ್ ಅವರು ಸೀರೆಯುಟ್ಟು, ಹಣೆಗೆ ಕುಂಕುಮ ಇಟ್ಟು ದಸರಾ ಉದ್ಘಾಟನಗೆ ಆಗಮಿಸಲಿ ಎಂದಿದ್ದಾರೆ. ಬಾನು ಅವರು ದಿನನಿತ್ಯ ಸೀರೆ ಉಡುವುದು ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಬಿಜೆಪಿಯ ಕೊಳಕು ಮನಸ್ಸುಗಳು ಈ ಹಿಂದೆ ದಸರಾ ಉದ್ಘಾಟಿಸಿದ ನಿಸಾರ್ ಅಹಮದ್ ಅವರನ್ನೂ ನಿಂದಿಸಿದ್ದವು. ಚಿನ್ನದ ಅಂಬಾರಿಯನ್ನು ಕಟ್ಟುವುದು ಮುಸಲ್ಮಾನ ಅಕ್ರಂ. ಆಗ ಉಂಟಾಗದ ಅಪಚಾರ ಬಾನು ಅವರು ದಸರಾ ಉದ್ಘಾಟಿಸಿದರೆ ಉಂಟಾಗುತ್ತದೆಯೇ ಎಂದು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಸಾಹಿತಿ ಕೆ.ಎಸ್. ಭಗವಾನ್, ಸವಿತಾ ಮಲ್ಲೇಶ್, ಜಗದೀಶ್ ಸೂರ್ಯ, ಸಿ. ಬಸವಲಿಂಗಯ್ಯ, ನಾ.ದಿವಾಕರ್, ಕಾಳ ಚೆನ್ನೇಗೌಡ, ಅಹಿಂದ ಜವರಪ್ಪ, ರತಿರಾವ್, ಹೊಸಕೋಟೆ ಬಸವರಾಜ್, ಹೊರೆಯಾಲ ದೊರೆಸ್ವಾಮಿ, ಟಿ.ಗುರುರಾಜ್ ಮೊದಲಾದವರು ಭಾಗವಹಿಸಿದ್ದರು.


