Online News in ಕನ್ನಡ

ಜನನ, ಮರಣ ನೋಂದಣಿ ಶೇಕಡಾ 100 ರಷ್ಟು ಆಗಬೇಕು; ಎಡಿಸಿ ಡಾ. ಶಿವರಾಜು

ಮೈಸೂರು: ಜಿಲ್ಲೆಯಲ್ಲಿ ಆಗುವ ಜನನ ಮತ್ತು ಮರಣ ನೋಂದಣಿ ಶೇಕಡ 100 ರಷ್ಟು ಕಡ್ಡಾಯವಾಗಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನನ ಮತ್ತು ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಜನನ ಮತ್ತು ಮರಣ ನೋಂದಣಿ ಮಾಡಬೇಕು. ಜಿಲ್ಲೆಯಲ್ಲಿ 147 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು, ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಜನನ ಮರಣ ಮಾಹಿತಿಯನ್ನು ನೋಂದಣಿ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಜನನ ಹಾಗೂ ಮರಣ ನೋಂದಣಿಯನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಜನನ ಮತ್ತು ಮರಣ ನೋಂದಣಿ ಮಾಡುವವರು ಜಿಲ್ಲೆಯಲ್ಲಿ 100 ಜನ ಇದ್ದು ಜನನ ಮತ್ತು ಮರಣ ನೋಂದಣಿ ಶುಲ್ಕ ಪಾವತಿಯ ಬಗ್ಗೆ ಮಾಹಿತಿ ಪಡೆಯಲು ಸ್ಪ್ರೆಡ್ ಶೀಟ್ ತಯಾರಿಸಿ ಎಲ್ಲರಿಗೂ ಕಳುಹಿಸಿ ಮಾಹಿತಿ ಮಾಡೆದುಕೊಳ್ಳಿ. ಶಿಶು ಮರಣ ದರವನ್ನು ಕಡಿಮೆ ಮಾಡಿ. ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಚಿತ್ರಾ ಮಾತನಾಡಿ, ಜಿಲ್ಲೆಯಲ್ಲಿ ಜುಲೈ ನಿಂದ ಸೆಪ್ಟೆಂಬರ್ ವರೆಗೆ ತ್ರೈಮಾಸಿಕ ಅವಧಿಯಲ್ಲಿ 10,005 ಜನನ ನೋಂದಣಿ ಆಗಿದ್ದು, ಇದೇ ಅವಧಿಯಲ್ಲಿ 9034 ಮರಣ ನೋಂದಣಿ ಆಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ಸಿಯಾಜ್ ಪಾಷಾ, ಡಾ. ಸಿರಾಜ್ ಅಹಮದ್, ಡಾ. ಹರಿಪ್ರಸಾದ್, ಡಾ ಶಿವರಾಮ್, ಸಹಾಯಕ ನಿರ್ದೇಶಕರಾದ ಹೊನ್ನೇಗೌಡ, ನಾಗರತ್ನ, ಸಹಾಯಕ ಸ್ಯಾಂಕಿಕ ಅಧಿಕಾರಿ ಗಣೇಶ್ ಸವಿತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Call Now Button