ಪತ್ರಿಕೆ, ವೆಬ್ಸೈಟ್, ಡಿಜಿಟಲ್ ಮಾಧ್ಯಮ, ಕಚೇರಿ ಉದ್ಘಾಟಿಸಲಿರುವ ಗಣ್ಯರು
ಮೈಸೂರು: ಪಾರಂಪರಿಕ ಮತ್ತು ಚಾರಿತ್ರಿಕ ನಗರಿ ಮೈಸೂರಿನ ಪತ್ರಿಕಾ ಪ್ರಪಂಚಕ್ಕೆ ವಿಜಯಕಾಲ ದಿನಪತ್ರಿಕೆ ಸೇರ್ಪಡೆಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಹಿರಿಯ ಪತ್ರಕರ್ತ ಕೆ.ದೀಪಕ್ ಸಾರಥ್ಯದಲ್ಲಿ ಪ್ರಕಟಗೊಳ್ಳಲಿರುವ ಪತ್ರಿಕೆಯನ್ನು ರಾಜ್ಯ ವಿಧಾನಸಭಾದ ಸಭಾಪತಿ ಯು.ಟಿ. ಖಾದರ್ ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಕ್ಷಣಕ್ಷಣಕ್ಕೂ ಸುದ್ದಿ ಪ್ರಸಾರ ಮಾಡುವ ಉದ್ದೇಶದಿಂದ ರಚಿಸಲಾಗಿರುವ ವಿಜಯಕಾಲ ವೆಬ್ಸೈಟ್ ಅನ್ನು ಪಂಚ ಭಾಷ ನಟ ಪ್ರಕಾಶ್ ರಾಜ್ ಅವರು ಅನಾವರಣಗೊಳಿಸಲಿದ್ದು, ಡಿಜಿಟಲ್ ಮಾಧ್ಯಮದ ಲಾಂಛನವನ್ನು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ.
ನಗರದ ಮೈಸೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿರುವ ವಿಜ್ಞಾನ ಭವನದ ಸಭಾಂಗಣದಲ್ಲಿ ಇಂದು(ಶನಿವಾರ) ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಟಿ. ದೇವೇಗೌಡ, ಹಿರಿಯ ಶಾಸಕ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಶಾಸಕರಾದ ಕೆ. ಹರೀಶ್ಗೌಡ, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಭಾಗವಹಿಸಲಿದ್ದಾರೆ. ಇದೇ ವೇಳೆ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡ ಪತ್ರಕರ್ತ ಡಾ. ಕೆ.ಶಿವಕುಮಾರ್, ಹಿರಿಯ ಪತ್ರಕರ್ತ ಡಿ. ಮಹಾದೇವಪ್ಪ ಹಾಗೂ ತುಮಕೂರಿನ ಹಿರಿಯ ಪತ್ರಕರ್ತರಾದ ಪಿ.ಎನ್. ನೃಪತುಂಗ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಗುವುದು.
ಸಂಸದರಿಂದ ಕಚೇರಿ ಉದ್ಘಾಟನೆ:
ಮೈಸೂರು ನಗರದ ವಿವಿ ಮೊಹಲ್ಲಾದಲ್ಲಿರುವ ವಿಜಯಕಾಲ ದಿನಪತ್ರಿಕೆಯ ಸುಸಜ್ರ್ಜಿತ ಕಚೇರಿಯನ್ನು ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಜೆ 5 ಗಂಟೆಗೆ ಉದ್ಘಾಟಿಸಲಿದ್ದಾರೆ. ಇವರೊಂದಿಗೆ ಶಾಸಕರಾದ ಟಿ.ಎಸ್. ಶ್ರೀವತ್ಸ, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ಜಿ.ಡಿ. ಹರೀಶ್ಗೌಡ, ಮಾಜಿ ಶಾಸಕ ಸಾ.ರಾ. ಮಹೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉದ್ಯಮಿ ಹೆಚ್.ಎನ್. ವಿಜಯ್, ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್, ಕೆಮ್ಮುಗಿಲು ದಿನಪತ್ರಿಕೆಯ ಸಂಪಾದಕ ಸೋಮಶೇಖರ್ ಕೆರಗೋಡು ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಹೋರಾಟಗಾರರು, ಪತ್ರಕರ್ತರು ಭಾಗಹಿಸಲಿದ್ದಾರೆ.
ಕನ್ನಡ ರಾಜ್ಯೋತ್ಸವದ ವಿಶೇಷಾಂಕ: ಕನ್ನಡ ರಾಜ್ಯೋತ್ಸವದ ದಿನದಂದೇ ವಿಜಯಕಾಲದ ಚಕ್ರ ತಿರುಗಲಾರಂಭಿಸಿದ್ದು ಕನ್ನಡ ನಾಡು, ನುಡಿ, ಸಂಸ್ಕøತಿಯನ್ನು ಬಿಂಬಿಸುವ ವಿಶೇಷಾಂಕವನ್ನು ಹೊರತರುತ್ತಿರುವುದು ಮೊದಲ ಸಂಚಿಕೆಯ ವಿಶೇಷ ಎಂದು ವಿಜಯಕಾಲ ಪತ್ರಿಕೆಯ ಮಾತೃ ಸಂಸ್ಥೆ ಪ್ರಜಾಭಾರತ ಮೀಡಿಯಾ ಹೌಸ್ನ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಆರ್. ವಿಭಾವಸು ತಿಳಿಸಿದ್ದಾರೆ.


