Online News in ಕನ್ನಡ

ಗಾಂಧಿ ಯುಗದ ಪತ್ರಿಕೋದ್ಯಮದಿಂದ ಗಾಂಧಿ ನೋಟಿನ ಪತ್ರಿಕೋದ್ಯಮದೆಡೆಗೆ…

ಕಾಲಮಾನ…

`ಪತ್ರಿಕೋದ್ಯಮದ ಮುಖ್ಯ ಧ್ಯೇಯ ಸಮಾಜ ಸೇವೆ…’ ಎಂದು ಹೇಳಿದ್ದ ಮಹಾತ್ಮ ಗಾಂಧಿಜಿಯೂ ಈಗ ನೆನಪು ಮಾತ್ರ ಮತ್ತು ಅವರ ಮಾತುಗಳು ಬರಿಯ ಮಾತಾಗಿ ಉಳಿದಿದೆ. ಕಾರಣ, ಭಾರತದ ಪತ್ರಿಕೋದ್ಯಮ ಗಾಂಧಿ ಯುಗದ ಪತ್ರಿಕೋದ್ಯಮದಿಂದ ಗಾಂಧಿ ನೋಟಿನ ಪತ್ರಿಕೋದ್ಯಮದ ಕಡೆಗೆ ಕೈಚಾಚಿ ನಿಂತು ಬಹಳ ಕಾಲವೇ ಆಗಿದೆ. ಆದ್ದರಿಂದಲೇ ಪತ್ರಕರ್ತರೂ ಆಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ` ಅಂದು ಭಾರತದ ಪತ್ರಿಕೋದ್ಯಮ ವೃತ್ತಿಯಾಗಿತ್ತು, ಇಂದು ವ್ಯಾಪಾರವಾಗಿದೆ’ ಎಂದು 65 ವರ್ಷಗಳ ಹಿಂದೆಯೆ ಹೇಳಿದ್ದರು. ಭಾರತದ ಮೊದಲ ಪತ್ರಿಕೆ ಬೆಂಗಾಲ್ ಗೆಜೆಟ್‍ನ ಸಂಪಾದಕ ಜಾನ್ ಅಗಸ್ಟಸ್ ಹಿಕ್ಕಿ ತಮ್ಮ ಮೊದಲ ಸಂಪಾದಕತ್ವದಲ್ಲಿ ` ದೇಹವನ್ನು ಗುಲಾಮಗಿರಿ ಇಟ್ಟು, ಮನಸ್ಸಿಗೆ ಸ್ವಾತಂತ್ರ ತಂದುಕೊಳ್ಳಲು ಪತ್ರಿಕೆ ಆರಂಭಿಸಿದ್ದೇನೆ’ ಎಂದು ಬರೆದುಕೊಂಡಿದ್ದರು. ಆದರೆ ಇಂದು ! ?
ಕಾಲವೊಂದಿತ್ತು…! ಪತ್ರಕರ್ತನೆಂದರೆ ಜನರಲ್ಲಿ ಒಂದಿಷ್ಟು ಸ್ಪಷ್ಟ ಕಲ್ಪನೆಯಿತ್ತು, ವೃತ್ತಿ ಪರತೆಗೆ ಒಂದು ಸಿದ್ಧ ಮಾದರಿಯಿತ್ತು. ಈಗ ಕಾಲ ಬದಲಾಗಿದೆ…! ಆಧುನಿಕತೆಯ ಅಬ್ಬರದಿಂದಾಗಿ ಮೊಬೈಲ್ ಹೊಂದಿರುವ ಪ್ರತಿಯೊಬ್ಬ ಮನುಷ್ಯನೂ ಪತ್ರಕರ್ತನಾಗಿದ್ದಾನೆ. ಪತ್ರಕರ್ತರಂತೆ ಬರೆಯುತ್ತಿದ್ದಾನೆ, ತೋರಿಸುತ್ತಿದ್ದಾನೆ, ಹೇಳುತ್ತಿದ್ದಾನೆ, ಪ್ರಕಟಿಸುತ್ತಿದ್ದಾನೆ, ಪ್ರಚಾರ ಮಾಡುತ್ತಿದ್ದಾನೆ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ನೈಜ ಪತ್ರಿಕೋದ್ಯಮ ಮತ್ತು ನೈಜ ಪತ್ರಕರ್ತರ ಅಸ್ಮಿತೆಗೆ ಬಹುದೊಡ್ಡ ಧಕ್ಕೆ ಬಂದಿರುವುದಂತ್ತೂ ಸತ್ಯ. ಇದಕ್ಕೆ ಸಾಕ್ಷಿ, ಸಾಮಾಜಿಕ ಮಾಧ್ಯಮವು ಸಹಜ ಮಾಧ್ಯಮವನ್ನೇ ಹಿಮ್ಮೆಟ್ಟಿಸುವ ಮಟ್ಟಕ್ಕೆ ವೇಗ ಪಡೆದುಕೊಂಡಿದ್ದು ಸುದ್ದಿಗಳು ವೈರಲ್ ಆಗುವ ಬದಲು ವೈರಲ್ ಆಗುವ ವಿಷಯಗಳು ಸುದ್ದಿಯಾಗುತ್ತಿರುವುದು ವಿಪರ್ಯಾಸ.
ಇದರ ಜತೆಗೆ ಅಂದು ಓದುಗರಿಗಾಗಿ ಪತ್ರಿಕೋದ್ಯಮ ಮಾಡಲಾಗುತ್ತಿತ್ತು. ಇಂದು ಮಾಲೀಕರಿಗಾಗಿ ಪತ್ರಿಕೋದ್ಯಮ ಮಾಡಲಾಗುತ್ತಿದೆ. ನಕಲಿ ಸುದ್ದಿ, ನಕಲಿ ಚರ್ಚೆ, ನಕಲಿ ಸಂವಾದಗಳಿಂದ ನಕಲಿ ರಾಜಕೀಯ ವ್ಯವಸ್ಥೆಯೊಂದು ನಿರ್ಮಾಣವಾಗಿದ್ದು, ಸರಕಾರಗಳನ್ನು ಪ್ರಶ್ನಿಸುವ ಮಾಧ್ಯಮ ಕಣ್ಮರೆಯಾಗಿದೆ. ಮಾಧ್ಯಮ ಸಂಸ್ಥೆಗಳು ಆಳುವವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮ್ಮ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಪತ್ರಕರ್ತನಿಗೆ ಸುದ್ದಿ ಕೇಳುವ ಬದಲು ಈ ತಿಂಗಳು ನೀವು ಸಂಸ್ಥೆಗೆ ತಂದುಕೊಟ್ಟ ವರಮಾನವೆಷ್ಟು ಎಂದು ಕೇಳಲಾಗುತ್ತಿದೆ. ಹಾಗಾಗಿ ಯಶಸ್ವಿ ಪತ್ರಕರ್ತರಾಗಿ ಉಳಿಯಬೇಕಾದಲ್ಲಿ ನಿಮ್ಮೊಳಗೆ ಒಬ್ಬ ವ್ಯಾಪಾರಿ, ಉದ್ಯಮಿ ಇರಲೇ ಬೇಕಾ ? ಎಂಬ ಜಿಜಾÐಸೆ ಮೂಡಿದೆ.
ಇನ್ನು ಭಾರತದಂತಹ ಜಾತಿ ವ್ಯವಸ್ಥೆಯೊಳಗೆ ಸುದ್ದಿ ತಾರತಮ್ಯ ಇಂದಿಗೂ ಜೀವಂತವಾಗಿದೆ. ಅಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಲೇಖನಗಳನ್ನು ಪ್ರಕಟಿಸಲು ನಿರಾಕರಿಸಿದ ಕೇಸರಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಶ್ರೀ ಬಾಲ ಗಂಗಾಧರ ತಿಲಕರ ಸಂತತಿ ಇಂದಿಗೂ ತಿಲಕವಿಟ್ಟು ಮಾಧ್ಯಮ ಲೋಕವನ್ನು ನಿಯಂತ್ರಿಸುತ್ತಿದ್ದು, ಶೋಷಿತ, ಧ್ವನಿ ರಹಿತ, ಅಸ್ಪøಶ್ಯ, ಹಿಂದುಳಿದ ಸಮಾಜಗಳ ಪರವಾದ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಎಲ್ಲಿದೆ ಎಂದು ಹುಡುಕಬೇಕಾಗಿದೆ. ಈನಡುವೆ, ಸುಳ್ಳು ಸುದ್ದಿಗಳ ಯುಗವೂ ಆರಂಭಗೊಂಡಿದ್ದು ಓದುಗರು ಮಾಹಿತಿ ಹುಡುಕುವುದಕ್ಕಿಂತಲೂ ಪತ್ರಿಕೆ ಮತ್ತು ಮಾಧ್ಯಮದೊಳಗೆ ಸತ್ಯ ಹುಡುಕಬೇಕಾದ ಸೋಚನೀಯ ಸ್ಥಿತಿ ನಿರ್ಮಾಣಗೊಂಡಿದೆ.
ಇಂತಹ ವಿಷಮ ಕಾಲಘಟ್ಟದಲ್ಲಿ ವಿಜಯಕಾಲ ದಿನಪತ್ರಿಕೆಯನ್ನು ವಾಸ್ತವದ ಅರಿವಿಟ್ಟುಕೊಂಡೇ ಆರಂಭಿಸಿದ್ದೇನೆ. ತುಮಕೂರು ಮೂಲದ ವಿಜಯಕಾಲ ದಿನಪತ್ರಿಕೆಯನ್ನು ಸಹೋದರ ಪಿ.ಎನ್. ನೃಪತುಂಗ ಅವರಿಂದ ಪಡೆದು ಮೈಸೂರಿನಿಂದ ಪ್ರಕಟ ಮಾಡಲು ಸರ್ವವಿಧದಲ್ಲೂ ಸಜ್ಜಾಗಿದ್ದೇವೆ. ಆಧುನಿಕ ಪ್ರಪಂಚಕ್ಕೆ ಹೊಂದಿಕೊಳ್ಳುವ ದೃಷ್ಟಿಯಿಂದ ವೈವಿಧ್ಯತೆಗಳು ಒಳಗೊಂಡ ವೆಬ್‍ಸೈಟ್ ಮತ್ತು ಡಿಜಿಟಲ್ ಮಾಧ್ಯಮವನ್ನೂ ಏಕಕಾಲಕ್ಕೆ ಆರಂಭಿಸಿದ್ದೇವೆ. 28 ವರ್ಷಗಳ ಮಾಧ್ಯಮ ವೃತ್ತಿಯ ಪಯಣದಲ್ಲಿ 15ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಸಮಾನ ಜ್ಞಾನ ಹೊಂದಿದ್ದೇನೆ. ಇದೆಲ್ಲದಕ್ಕಿಂತ್ತ ಮಿಗಿಲಾಗಿ ಒಳ್ಳೆಯ ಪತ್ರಿಕೋದ್ಯಮ ಮತ್ತು ಕೆಟ್ಟ ಪತ್ರಿಕೋದ್ಯಮದ ನಡುವಿನ ವ್ಯತ್ಯಾಸದ ಅರಿವು ನನಗಿದೆ. ನಾವು ಸಂಗ್ರಹಿಸುವ ಮಾಹಿತಿಗೆ ಮೌಲ್ಯವನ್ನು ತುಂಬಿ ಓದುಗರಿಗೆ ಅರ್ಪಿಸುವುದೇ ಒಳ್ಳೆಯ ಪತ್ರಿಕೋದ್ಯಮ ಎಂಬ ಪ್ರಜ್ಞೆ ನಮಗಿದೆ. `ಕೆಟ್ಟ ಪತ್ರಿಕೋದ್ಯಮ ಮಾಡೋದು ಅಗ್ಗದ ಕೆಲಸ- ಒಳ್ಳೆಯ ಪತ್ರಿಕೋದ್ಯಮ ಮಾಡೋದು ದುಬಾರಿ ಕೆಲಸ’ ಎಂಬ ಸತ್ಯದ ಅರಿವು ನಮಗಿದೆ.
ನನ್ನ ಆತ್ಮೀಯ ಓದುಗರೇ,
`ನಮ್ಮ ಅಭಿವ್ಯಕ್ತಿ-ನಮ್ಮ ಶಕ್ತಿ’ ಎಂಬ ಧೈಯದೊಂದಿಗೆ ಮಾಧ್ಯಮ ಲೋಕಕ್ಕೆ ವಿಜಯಕಾಲ ದಿನಪತ್ರಿಕೆಯ ಸೇರ್ಪಡೆಗೊಂಡಿದೆ. ಇಲ್ಲಿ ನಿಮಗೆ ಸುದ್ದಿ ಮಾತ್ರವಲ್ಲ ಸಂವೇದನೆ ಮತ್ತು ಸಂವಾದಕ್ಕೂ ಅವಕಾಶವಿದೆ. ಮಾನವ ಹಕ್ಕು ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಲಿದೆ. ಓದುಗರ ಒಡಲಾಳದ ವೇದನೆಗೆ ವೇದಿಕೆಯಾಗಲಿದೆ. ಮಾಧ್ಯಮ ಎನ್ನುವುದು ಅರಿವು ಎಂಬ ಪ್ರಜೆÐಯೊಂದಿಗೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ದಾರಿಯಾಗಲಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಆಸರೆಯಾಗಲಿದೆ. ಪ್ರಶ್ನಿಸುವುದು, ಮಾತನಾಡುವುದು, ಬರೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಮಹಾಪಾಪಿಗಳಿಗಿಂತ್ತಲೂ ಮೌನಿಗಳು ಈ ಸಮಾಜಕ್ಕೆ ಬಹುದೊಡ್ಡ ಅಪಾಯ. ಒಬ್ಬ ಒಳ್ಳೆಯ ಪತ್ರಕರ್ತ ಏನನ್ನು ಹೇಳಬಹುದೋ, ಏನನ್ನು ಬರೆಯಬಹುದೋ, ಏನನ್ನೂ ತೋರಿಸಬಹುದೋ ಅಷ್ಟನ್ನೇ ನಾವು ಮಾಡುತ್ತೇವೆ. ಪ್ರತಿಯೊಬ್ಬರೂ ಅಜ್ಞಾಮನದಿಂದ ಜ್ಞಾನದ ಕಡೆಗೆ ಮುಖ ಮಾಡಬೇಕೆನ್ನುವುದೇ ನಮ್ಮ ಹಂಬಲ, ಆಮೂಲ ಎಲ್ಲರ ಬದುಕಿನಲ್ಲಿ ಬರಲಿ ಶಾಶ್ವತ ವಿಜಯಕಾಲ. `ಜೀವನ ಸುದೀರ್ಘವಾಗಿರುವುದಕ್ಕಿಂತ್ತಲೂ ಶ್ರೇಷ್ಠವಾಗಿರಬೇಕೆಂಬ’ ಮಹಾನ್ ಮಾನವತವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳೊಂದಿಗೆ ಈ ದಿನದ `ಕಾಮಮಾನ’ಕ್ಕೆ ವಿರಾಮ ಹೇಳುತ್ತೇನೆ.
ನಿಮ್ಮ ಸಹಕಾರ, ಬೆಂಬಲ ನಮಗಿರಲಿ
ಪ್ರೀತಿಯಿಂದ
ಕೆ.ದೀಪಕ್
ಪ್ರಧಾನ ಸಂಪಾದಕರು

Call Now Button