ಕಾಲಮಾನ-೮
ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ,
ಪ್ರಧಾನ ಸಂಪಾದಕ
ಡಿ.6 ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ. ಅಂದರೆ `ದಲಿತ ಸೂರ್ಯ’ ಅಸ್ತಂಗತಗೊಂಡ ದಿವಸ. ನಮ್ಮನ್ನು ಅಗಲಿ 69 ವರ್ಷಗಳು ಉರುಳಿದರೂ ಅವರು ಬಿಟ್ಟೋದ ಪ್ರಶ್ನೆಗಳಿಗೆ ಇಂದಿಗೂ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ದುರದೃಷ್ಟ ವಶಾತ್, ದಿಕ್ಕುದೆಸೆ ಇಲ್ಲದೆ ದಿಕ್ಕೆಟ್ಟಿದ್ದ ಭಾರತದಕ್ಕೆ ದೀವಿಗೆಯಾದ ಡಾ. ಅಂಬೇಡ್ಕರ್ ಅವರಿಗೆ ಇಂದಿಗೂ ಇದೇ ನೆಲದಲ್ಲಿ ಅವಮಾನಗಳು ನಿಂತ್ತಿಲ್ಲ. ಭಾರತಕ್ಕೆ ಬೆಳಕಾದ ಅಂಬೇಡ್ಕರ್ ಅವರ ಹೆಸರು, ವಿಚಾರಧಾರೆ ಕೇಳಿದರೇ, ಭಾವಚಿತ್ರ, ಪ್ರತಿಮೆಗಳನ್ನು ನೋಡಿದರೇ ಹೊಟ್ಟೆಗೆ ಬೆಂಕಿ ಬಿದ್ದವರಂತೆ ಅಸೂಯೆಯಿಂದ ನರಳುವ ಜನರು ನಮ್ಮ ಸುತ್ತ ಈಗಲೂ ಇದ್ದಾರೆ.
ದಲಿತರು ಡಾ. ಅಂಬೇಡ್ಕರ್ ಅವರ ವ್ಯಕ್ತಿತ್ವ, ಹೋರಾಟ, ಸಾಧನೆ, ಕೊಡುಗೆಗಳ ಬಗ್ಗೆ ಮಾತನಾಡಿದರೆ `ಜಾತಸ್ಥರು ಹೊಗಳುತ್ತಿದ್ದಾರೆ’ ಎಂದು ಮೂಗು ಮುರಿಯುವ ಮೂರ್ಖರಿಗೆ ಈ ದಿನದ `ಕಾಲಮಾನ’ವನ್ನು ಸಮರ್ಪಿಸುತ್ತಿದ್ದೇನೆ. ಏಕೆಂದರೆ, ಬಾಬಾ ಸಾಹೇಬರು ನಿಧನರಾದ ಸುದ್ದಿಯಿಂದ ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತು ದಿಗ್ಭ್ರಮೆ ವ್ಯಕ್ತಪಡಿಸಿತ್ತು. ಶೋಷಿತರು ಶೋಕಸಾಗರದಲ್ಲಿ ಮುಳುಗಿದ್ದರೆ, ಭಾರತಕ್ಕೆ ಕತ್ತಲೆ ಆವರಿಸಿತ್ತು. ಇವರ ಅಗಲಿಕೆಯ ಸುದ್ದಿ ಪ್ರಪಂಚದ ಎಲ್ಲ ದೇಶದ ಪ್ರಮುಖ ಪತ್ರಿಕೆಗಳ ಮುಖ ಪುಟದಲ್ಲಿ ವರದಿಯಾಗಿತ್ತು. ಭಾರತ ಮಾತ್ರವಲ್ಲ ಬಹುತೇಕ ಪ್ರಮುಖ ದೇಶಗಳು ತಮ್ಮ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸಿ ಶೋಕಾಚರಣೆಯನ್ನು ಘೋಷಿಸಿದ್ದವು. ವಿಶೇಷವೆಂದರೆ, ಪ್ರಮುಖ ಪತ್ರಿಕೆಗಳು ಡಾ. ಅಂಬೇಡ್ಕರ್ ಅವರ ಬಗ್ಗೆ ಬರೆದುಕೊಂಡಿದ್ದನ್ನು ಓದಿದರೆ ಸಾಕು ಅವರು ನಮಗೆ ಅರ್ಥವಾಗುತ್ತಾರೆ.
ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ` ಅಂಬೇಡ್ಕರ್ ಚಿಂತನೆಗೆ ದೇಶ ಸ್ಪಂದಿಸಿದ್ದರೆ ಹಿಂದೂ ಸಮಾಜದಲ್ಲಿನ ಕೊಳಕು ತೊಳೆದು ಹೋಗುತ್ತಿತ್ತು ಮತ್ತು ಅಂಬೇಡ್ಕರ್ರಿಂದ ದೇಶ ನಿರ್ಮಿಸುವ ಕಾರ್ಯ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿತ್ತು’ ಎಂದು ಪ್ರಕಟಿಸಿದ್ದಾರೆ. ಅಂಬಾಲಾದ `ಟ್ರಿಬ್ಯೂನ್’ ಪತ್ರಿಕೆಯು `ಮುಂದಿನ ದಿನಗಳಲ್ಲಾದರೂ ಪರಿಶಿಷ್ಟ ಜಾತಿಗಳ ಬದುಕನ್ನು ಬಹು ಬೇಗನೇ ಹಸನುಗೊಳಿಸುವ ಕಾರ್ಯಕ್ಕೆ ಸರಕಾರ ಮತ್ತು ಸಮಾಜ ಆದ್ಯತೆ ನೀಡಬೇಕು. ಆಗಲಾದರೂ ಪರಿಶಿಷ್ಟ ಜಾತಿಗಳಲ್ಲೇ ಇರುವ ನೂರಾರು ಅಂಬೇಡ್ಕರರ ಸೇವೆಯು ದೇಶಕ್ಕೆ ಸಿಗುತ್ತದೆ. ಇಲ್ಲದೆ ಹೋದರೆ ಅವರುಗಳೂ ಕೂಡ ಅಂಬೇಡ್ಕರ್ ಹಾಗೆ ತಮ್ಮ ಸಮಯ, ಶಕ್ತಿ, ಸಾಮಥ್ರ್ಯವನ್ನು ತಮ್ಮ ಸಮುದಾಯದ ಹಿತದಲ್ಲೇ ವಿನಿಯೋಗಿಸಿಬಿಡಬಹುದು’ ಎಂದು;

ʻಅಂಬೇಡ್ಕರ್ ಅಸ್ಪೃಶ್ಯರ ಹಿತಕ್ಕಾಗಿ ಹೋರಾಡಿದರು ಎಂದು ಹೆಚ್ಚು ಪ್ರಚಾರವಾಗಿದೆ. ಆದರೆ ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯ ಬಹುದೊಡ್ಡ ಕಂಬವಾಗಿದ್ದರು ಎಂಬ ಸತ್ಯ ಬೆಳಕಿಗೆ ಬರಬೇಕು. ಅವರ ಹೃದಯ ಪರಿಶಿಷ್ಟ ಜಾತಿಗಳ ಒಳಿತನ್ನು ಬಯಸುತ್ತಿದ್ದರೂ, ಅವರ ದೃಷ್ಟಿ ಭಾರತವನ್ನು, ಪ್ರಜಾಪ್ರಭುತ್ವವನ್ನು ಸಮರ್ಥವಾಗಿ ರೂಪಿಸುವಂಥ ಕನಸನ್ನು ಕಾಣುತ್ತಿತ್ತು – ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು , ೧೯೫೬
`ಹಿಂದೂಸ್ತಾನ ಟೈಮ್ಸ್’ ಪತ್ರಿಕೆಯು ` ಅಂಬೇಡ್ಕರ್ ದೇಶಕ್ಕೆ ಸಲ್ಲಿಸಿದ ಸೇವೆ ಚಿರಕಾಲ ನೆನಪಿನಲ್ಲಿರುತ್ತದೆ. ತಮ್ಮ ಸಮಕಾಲೀನರನ್ನು ಹಲವು ವಿಧದಲ್ಲಿ ಹಿಂದಕ್ಕೆ ಹಾಕುವಷ್ಟು ಅವರು ಚೈತನ್ಯಶಾಲಿಯಾಗಿದ್ದರು. ಅವರ ನಿಧನದ ನಂತರವಾದರೂ ಪರಿಶಿಷ್ಟ ಜಾತಿಗಳ ಬದುಕು ಶೀಘ್ರವಾಗಿ ಬದಲಾಗಲಿ’ ಎಂದು ಅಕ್ಷರಗಳ ಮೂಲಕ ಆಶಿಸಿದೆ. `ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯು `ಅನ್ಯಾಯದ ವಿರುದ್ಧ ದನಿ ಎದ್ದಾಗಲೆಲ್ಲ ಅಂಬೇಡ್ಕರ್ ದನಿ ಕೇಳಿಸುತ್ತದೆ. ಪರಿಶಿಷ್ಟ ಜಾತಿಗಳೇ ಅಲ್ಲದೆ, ಕಾರ್ಮೀಕರು, ಮಹಿಳೆಯರು, ಹಿಂದುಳಿದವರು, ದುರ್ಬಲರು ಅವರನ್ನು ಸದಾ ತಮ್ಮ ಹೃದಯದಲ್ಲಿ ಇಟ್ಟುಕೊಂಡಿರುತ್ತಾರೆ’ ಎಂದು; ಕಲ್ಕತ್ತಾದ `ಸ್ಟೇಟ್ಸ್ಮನ್’ ಪತ್ರಿಕೆಯು `ಅಂಬೇಡ್ಕರ್ ಬುದ್ಧಿಶಕ್ತಿ ಮತ್ತು ಇಚ್ಛಾಶಕ್ತಿಗಳ ಸಂಗಮವಾಗಿದ್ದರು. ಅವರು ಕಾನೂನು, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಕಾರ್ಮಿಕ ಕಾಯ್ದೆಗಳು, ಸಂವಿಧಾನ ಜ್ಞಾನ, ರಾಜಕಾರಣ, ಧರ್ಮಶಾಸ್ತ್ರಗಳು…ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಪರಿಣತರಾಗಿದ್ದರು’ ಎಂದು; `ಅಮೃತ ಬಜಾರ್’ ಪತ್ರಿಕೆಯು `ಹಳೆ ವ್ಯವಸ್ಥೆಗೆ ಇಟ್ಟ ಬಾಂಬಿನ ಹೆಸರೇ ಅಂಬೇಡ್ಕರ್. ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದ್ದ ಯೋಧನೊಬ್ಬ ಅಗಲಿದ’ ಎಂದು ಬಣ್ಣಸಿದೆ.
`ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ` ಅಂಬೇಡ್ಕರ್ ಅಸ್ಪೃಶ್ಯರ ಹಿತಕ್ಕಾಗಿ ಹೋರಾಡಿದರು ಎಂದು ಹೆಚ್ಚು ಪ್ರಚಾರವಾಗಿದೆ. ಆದರೆ ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯ ಬಹುದೊಡ್ಡ ಕಂಬವಾಗಿದ್ದರು ಎಂಬ ಸತ್ಯ ಬೆಳಕಿಗೆ ಬರಬೇಕು. ಅವರ ಹೃದಯ ಪರಿಶಿಷ್ಟ ಜಾತಿಗಳ ಒಳಿತನ್ನು ಬಯಸುತ್ತಿದ್ದರೂ, ಅವರ ದೃಷ್ಟಿ ಭಾರತವನ್ನು, ಪ್ರಜಾಪ್ರಭುತ್ವವನ್ನು ಸಮರ್ಥವಾಗಿ ರೂಪಿಸುವಂಥ ಕನಸನ್ನು ಕಾಣುತ್ತಿತ್ತು’ ಎಂದೂ ಹಾಗೂ ಲಂಡನ್ನಿನ `ದಿ ಟೈಮ್ಸ್’ ಪತ್ರಿಕೆಯು `ಭಾರತದಲ್ಲಿ ಬ್ರಿಟಿಷ್ ಆಡಳಿತದ ದಿನಗಳಲ್ಲಿ ಅಂಬೇಡ್ಕರ್ ವಹಿಸಿದ ಪಾತ್ರ ವಿಶ್ವ ಗಮನಿಸುವಂಥದ್ದು, ದುಂಡುಮೇಜಿನ ಪರಿಷತ್ತಿನಲ್ಲಿ ಅವರು ಆಡಿದ ಮಾತುಗಳು ಅವರ ವಿದ್ವತ್ತಿಗೆ ಸಾಕ್ಷ್ಯ’ ಎಂದು ವರದಿ ಮಾಡಿತು.
ಈ ಮಹಾನ್ ಮಾನವತಾವಾದಿಗೆ ಭಾರತ ಸರಕಾರವು 1990ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರೆ, 2016ರಲ್ಲಿ ವಿಶ್ವ ಸಂಸ್ಥೆಯು ಅವರ ಜನುಮ ದಿನವನ್ನು (ಏಪ್ರಿಲ್ 14) `ವಿಶ್ವಜಾÐನ ದಿನ’ ಎಂದು ಘೋಷಿಸಿತು. ಕೆನಡ ಸರಕಾರವು ಡಾ. ಅಂಬೇಡ್ಕರ್ ಅವರ ಮೇಲಿನ ಗೌರವಾರ್ಥ ಏಪ್ರಿಲ್ 14ನೇ. 2021ರ ಜಯಂತಿಯಂದು `ಡಾ. ಅಂಬೇಡ್ಕರ್ ಸಮಾನತ ದಿನ’ ಎಂದು ಘೋಷಿಸಿತು.
ಈ ಎಲ್ಲ ಹೊಗಳಿಕೆ, ಪ್ರಶಂಸೆ, ಗುಣಗಾನ, ಗೌರವಗಳು ಭಾರತದ ಬೇರಾವ ನಾಯಕರಿಗೂ ದೊರಕಲಿಲ್ಲವೆಂದಾದರೆ ನೀವು ಅವಮಾನಿಸುತ್ತಿವುದು ಅಂಬೇಡ್ಕರ್ ಅವರನ್ನಲ್ಲ, ಆಮೂಲಕ ನಿಮ್ಮನ್ನು ನೀವೆ ಅಪಹಾಸ್ಯಕ್ಕೆ ಈಡಾಗುತಿದ್ದೀರಿ ಎಂದರ್ಥ. ಇಂದಿಗೂ ಡಾ. ಬಿ.ಆರ್.ಅಂಬೇಡ್ಕರ್ ಅವರು ಶತ್ರುಗಳ ಮುಂದೆ ಪ್ರತಿ ವರ್ಷ, ಪ್ರತಿ ತಿಂಗಳು, ಪ್ರತಿ ದಿನ, ಪ್ರತಿ ಕ್ಷಣ ಬೆಳೆಯುತ್ತಲೇ ಇದ್ದಾರೆ ಎಂದು ಹೇಳುತ್ತಾ ದಲಿತ ವಿರೋಧಿಗಳು, ಅಂಬೇಡ್ಕರ್ ವಿರೋಧಿಗಳ ಆತ್ಮಕ್ಕೆ ಶಾಂತಿ ಕೋರುತ್ತಾ `ಕಾಲಮಾನ’ಕ್ಕೆ ಅಲ್ಪ ವಿರಾಮ ಹೇಳುತ್ತೇನೆ…
ಜೈ ಭೀಮ್…


