ಲೇಖಕರು: ಮೈ ನಾ ಲೋಕೇಶ್
ಕರ್ನಾಟಕದ ನೆಲ, ಭಾಷೆ, ಸಂಸ್ಕೃತಿಯ ಪ್ರತಿರೂಪವಾಗಿ, ಸರಳತೆಯ ಮೂರ್ತ ರೂಪವಾಗಿ, ಅಭಿನಯದ ವಿರಾಟರೂಪದಿಂದ ಕನ್ನಡಿಗರ ಹೃದಯ ಸಿಂಹಾಸನದ ಅನಿಭಷಕ್ತ ದೊರೆಯಾಗಿ ನೆಲೆ ನಿಂದವರು ಡಾ. ರಾಜಕುಮಾರ್ . ಅವರು ಕೇವಲ ಕಲಾವಿದರಲ್ಲ, ಅವರು ನಾಡಿನ ಅಸ್ಮಿತೆಯ ಪ್ರತೀಕವಾಗಿದ್ದರು. ʻಕನ್ನಡವೇ ಸತ್ಯ, ಕನ್ನಡವೇ ನಿತ್ಯʼ ಎಂಬ ಭಾವನೆಗೆ ಜೀವ ತುಂಬಿದ ಜೀವನ್ಮುಖಿ ರಾಜ್.

ಮುತ್ತುರಾಜನ ಬಾಲ್ಯ,,ಕಲ್ಲು. ಮುಳ್ಳುಗಳ ಹಾದಿಯಾಗಿತ್ತು. ಹೊಟ್ಟೆ ಹೊರೆಯಲು ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಪುಟ್ಟಸ್ವಾಮಯ್ಯನವರ ಬವಣೆಯನ್ನು ಅರಿತು, ಮೂರನೆಯ ತರಗತಿಯಲ್ಲೇ ಶಾಲೆಗೆ ವಿದಾಯ ಹೇಳಿದರು ರಾಜ್. ಬಡತನ ಮತ್ತು ಸಾಮಾಜಿಕ ಅಪಮಾನಗಳನ್ನು ಮೌನವಾಗೇ ಅನುಭವಿಸಿ, ಅರಗಿಸಿ ಅರಳಿ ನಿಂತ ಬ್ರಹ್ಮ ಕಮಲ ರಾಜ್ ಕುಮಾರ್. ಜಾತಿ ಮತ್ತು ವರ್ಗ ವ್ಯವಸ್ಥೆ ಯ ಕಬಂಧ ಬಾಹುಗಳ ಹಿಡಿತದಲ್ಲಿ ನಲುಗುತ್ತಿದ್ದ, ಸಾಮಾಜಿಕ ಸಂದರ್ಭದಲ್ಲಿ ಯಾವುದೇ ಪ್ರಬಲ ಜಾತಿಯ, ಶ್ರೀಮಂತಿಕೆಯ ಬೆಂಬಲವಿಲ್ಲದೇ, ಶಿಕ್ಷಣದ ಒತ್ತಾಸೆಯಿಲ್ಲದೆ ಕೇವಲ ಪ್ರತಿಭೆ, ಶ್ರಮದಿಂದ ಸಾಮಾಜಿಕ- ಆರ್ಥಿಕ, ಕರಾಳ ಕಟ್ಟಳೆಗಳನ್ನು ಮೀರಿ ಬೆಳೆದು ನಿಂತ ಅನನ್ಯ ಸಾಧಕ ಡಾ ರಾಜ್ ಕುಮಾರ್.

ಒಪ್ಪೊತ್ತಿನ ಊಟಕ್ಕೂ ಕಷ್ಟ ಪಟ್ಟು,, ಶ್ರಮದ, ಬೆವರಿನ ಮಹತ್ವ ಅರಿತು, ಮೊದಲು ಬೆವರಿನ ಮನುಷ್ಯನಾಗಿ ನಂತರ ಬಂಗಾರದ ಮನುಷ್ಯ ನಾದ ಯುಗ ಪುರುಷ ಡಾ ರಾಜ್ ಕುಮಾರ್. ತಮ್ಮ ಚಿತ್ರ ಗಳ ಮೂಲಕ ಕರ್ನಾಟಕದ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲಾ ವೈಭವಕ್ಕೆ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟ ಪ್ರಾತಃ ಸ್ಮರಣೀಯರು ಡಾ ರಾಜ್ ಕುಮಾರ್. ಇಡೀ ಜಗತ್ತಿನಲ್ಲಿ ರಾಜ್ ರಷ್ಟು ವೈವಿಧ್ಯಮಯ ಪಾತ್ರಗಳನ್ನು, ಅಷ್ಟೇ ಸಮರ್ಥವಾಗಿ ನಿಭಾಯಿಸಿದ ,ಗಾಯನದಲ್ಲೂ ಸೈ ಎನಿಸಿಕೊಂಡ ಕಲಾವಿದ ಮತ್ತೊಬ್ಬರಿಲ್ಲ.
ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ವೃತ್ತಿ ಜೀವನ ಆರಂಭಿಸಿದ ರಾಜ್ ದಾಖಲೆಯ ಇನ್ನೂರು ಚಿತ್ರಗಳಲ್ಲಿ, ಅಭಿನಯಿಸಿ,ಅತಿ ಹೆಚ್ಚು ಯಶಸ್ವಿ ಚಿತ್ರಗಳನ್ನು ಕೊಟ್ಟ ವರನಟ . ಚಲನಚಿತ್ರ ರಂಗವೆಂದರೆ, ಭೋಗ, ಹಣ, ಆಡಂಬರ ಎಂಬ ಜನಾಭಿಪ್ರಾಯದ ನಡುವೆ ಈ ರಂಗವನ್ನು ಸದ್ಭಾವನೆಯ ,ಆಧ್ಯಾತ್ಮಿಕದ ಕ್ಷೇತ್ರವನ್ನಾಗಿ ಕಟ್ಟಿದ ಸಾಂಸ್ಕೃತಿಕ ರಾಯಭಾರಿ ಡಾ ರಾಜ್ ಕುಮಾರ್.

ತಮ್ಮ ಚಿತ್ರ ಗಳ ಮೂಲಕ ಸಮಾಜದ ಓರೆ -ಕೋರೆ ಗಳನ್ನು ತಿದ್ದುವ, ಸಾಮಾಜಿಕ ಅನಿಷ್ಟ ಗಳು ವಿರುದ್ಧ ಹೋರಾಡುವ, ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಮಾಜದಲ್ಲಿ ಧನಾತ್ಮಕ ಪರಿವರ್ತನೆಗೆ ನಾಂದಿ ಹಾಡಿದ್ದು ವಿಶೇಷ. ೧೯೭೧ ರಲ್ಲಿ ತೆರೆ ಕಂಡ ಬಂಗಾರದ ಮನುಷ್ಯ ಚಲನಚಿತ್ರ ಚಿತ್ರಮಂದಿರ ದಲ್ಲಿ ಎರಡು ವರ್ಷಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡು ದಾಖಲೆ ಬರೆಯಿತು. ರಾಜೀವಪ್ಪನ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ, ರಾಜ್ ಮಣ್ಣಿನ ಮಗನಾಗಿ ನೀಡಿದ ಸಂದೇಶ ,ನಾನಾ ಕಾರಣಗಳಿಗಾಗಿ ನಗರಗಳಿಗೆ ವಲಸೆ ಹೋಗಿದ್ದ . ಗ್ರಾಮೀಣ ಯುವಕರು..ಮತ್ತೆ ಹಳ್ಳಿಗಳತ್ತ, ಕೃಷಿಯತ್ತ ಒಲವು ತೋರುವ ಪರಿವರ್ತನೆಗೆ ಮುನ್ನುಡಿ ಬರೆಯಿತು.
ಕರ್ನಾಟಕಕ್ಕೆ ಡಾ ರಾಜ್ ಕುಮಾರ್ ಕೊಡುಗೆ ಏನು? ಎಂಬ ಕೆಲವು ಕುಹಕು ನುಡಿಗಳ ನಡುವೆ, ಎರಡು ತಲೆಮಾರು. ಕಳೆದರೂ ಅವರು, ಪೀಳಿಗೆಗಳನ್ನು ಪ್ರಭಾವಿಸುತ್ತಿರುವುದೇ, ಆಕರ್ಷಿಸುತ್ತಿರುವುದೇ ಆ ಅಪೂರ್ವ ನಟನ ಅನನ್ಯತೆಗೆ ಸಾಕ್ಷಿ. ಕನ್ನಡ ಭಾಷೆಯಿರುವ ತನಕ ರಾಜ್ ನಮ್ಮೊಂದಿಗಿರುತ್ತಾರೆ. ಅವರು ಅಮರಜೀವಿ. ನಾಡು ನುಡಿಗೆ ಸಂಕಷ್ಟ ಎದುರಾದಾಗ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ರಾಜ್, ೧೯೮೧ ರಲ್ಲಿ ಕನ್ನಡ ಭಾಷೆ ಗೆ ಅಗ್ರಸ್ಥಾನ ದೊರೆಯಬೇಕು ಎಂದು ಪಾಟೀಲ್ ಪುಟ್ಟಪ್ಪ, ಚಂಪಾ ಮುಂತಾದ ಕನ್ನಡ ಚಳವಳಿಗಾರರು ಆರಂಭಿಸಿದ ಗೋಕಾಕ್ ಚಳುವಳಿಗೆ ಬೆಂಬಲವಾಗಿ ನಿಂತರು, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಭಾಷಾ ಹೋರಾಟಕ್ಕೆ ಸಿಂಹಬಲ ತುಂಬಿದರು.

೧೯೬೧ ರಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ, ವಂತಿಗೆ ಸಂಗ್ರಹಿಸಿ ಕೊಟ್ಟು ಅವರ ನೆರವಿಗೆ ನಿಂತು ಮಾನವೀಯತೆ ಮೆರೆದರು. ಡಬ್ಬಿಂಗ್ ಹಾವಳಿಯಿಂದ ತತ್ತರಿಸಿದ್ದ, ಕನ್ನಡ ಚಿತ್ರರಂಗದ ಪರವಾಗಿ ಡಬ್ಬಿಂಗ್ ವಿರೋಧಿ ಹೋರಾಟಕ್ಕೆ ಶಕ್ತಿ ತುಂಬಿದರು. ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರ ನಿರ್ಮಾಣಕ್ಕೆ ರಸಮಂಜರಿ ಕಾರ್ಯಕ್ರಮಗಳನ್ನು ಉಚಿತವಾಗಿ ನೆಡೆಸಿಕೊಟ್ಟರು. ಇನ್ನು ವೈಯಕ್ತಿಕವಾಗಿ, ಸಂಕಷ್ಟ ದಲ್ಲಿದ್ದ ಕಲಾವಿದರು ತಂತ್ರಜ್ಞರಿಗೆ ಸಹಾಯ ಹಸ್ತ ಚಾಚುತ್ತಿದ್ದ ರಾಜ್, ಪ್ರಚಾರಕ್ಕೆ ಆಸ್ಪದ ಕೊಡುತ್ತಿರಲಿಲ್ಲ, ಬಲಗೈಯಿಂದ ನೀಡಿದ ದಾನ ಎಡಗೈ ಗೆ ತಿಳಿಯಬಾರದು ಎಂಬುದು ಅವರ ಸಿದ್ಧಾಂತ ವಾಗಿತ್ತು. ಮೈಸೂರಿನಲ್ಲಿ ಶ್ರೀಮತಿ ಪಾರ್ವತಮ್ಮನವರ ಒತ್ತಾಸೆಯಂತೆ ನಿರ್ಮಿಸಿದ ಶಕ್ತಿ ಧಾಮ, ಅಶಕ್ತ, ದೀನ ಮಹಿಳೆಯರ ಆಶ್ರಯತಾಣವಾಗಿ , ಅವರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.

ಒಂದು ಕಾಲಮಾನದ ಕನ್ನಡ ಬದುಕು ಹೇಗಿರಬೇಕು? ಎಂಬುದನ್ನು ತಮ್ಮ ಚಿತ್ರಗಳ ಮೂಲಕ ಕಲಿಸಿ ಕೊಟ್ಟು ಸಮಾಜದ ಒಗ್ಗಟ್ಟಿಗೆ , ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರೇರಣೆ ನೀಡಿದವರು ಡಾ ರಾಜ್ ಕುಮಾರ್. ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಜ್ಯ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಡಾ ರಾಜ್ ಕುಮಾರ್ ಭಾಜನರಾದ ಪ್ರಶಸ್ತಿ, ಬಿರುದುಗಳು ಅಗಣಿತ. ತಮಗಿದ್ದ ಜನಪ್ರಿಯತೆ, ಜನಬೆಂಬಲದಿಂದ ಮನಸ್ಸು ಮಾಡಿದ್ದರೆ, ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗ ಸ್ಥಾನ ಪಡೆಯಬಹುದಾಗಿತ್ತು ಆದರೂ, ಕನ್ನಡಿಗರು ತಮ್ಮ ಹೃದಯದಲ್ಲಿ ನೀಡಿರುವ ಅಭಿಮಾನವೇ ಸಾಕು ಎಂದ ಸಂತ ಡಾ ರಾಜ್ ಕುಮಾರ್.
ಅವರು, ವ್ಯಕ್ತಿತ್ವದಲ್ಲಿ ಶಿಸ್ತು, ನೈತಿಕತೆ ಮೌಲ್ಯಗಳನ್ನು ಕಾಪಾಡಿಕೊಂಡು ಯುವಜನತೆಗೆ ಆದರ್ಶಪ್ರಾಯರಾದರು. ರಾಜ್ ಕುಮಾರ್ ಜನ್ಮಶತಮಾನೋತ್ಸವದ ಹೊಸ್ತಿಲಲ್ಲಿ, ಅರ್ಹವಾಗಿ ದೊರೆಯಬೇಕಾದ ಭಾರತ ರತ್ನ ಪ್ರಶಸ್ತಿ ಈ ಕಲಾ ತಪಸ್ವಿಗೆ ದೊರೆಯಲಿ ಎಂಬುದು ಏಳು ಕೋಟಿ ಕನ್ನಡಿಗರ ಒತ್ತಾಸೆ.
ಅವರ ಅಭಿನಯ..ಅವರು ಕಟ್ಟಿಕೊಟ್ಟ ಮೌಲ್ಯಗಳು ಇಂದಿಗೂ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿದ್ದು, ಕರ್ನಾಟಕದ ಅಸ್ಮಿತೆಯನ್ನು ಶಾಶ್ವತವಾಗಿ ಬೆಳಗಿಸುತ್ತಿವೆ.


